(ನ್ಯೂಸ್ ಕಡಬ) newskadaba.com ಕಡಬ,ಜೂ. 04. ತಾಲೂಕಿನ ಕೋಡಿಂಬಾಳ ಗ್ರಾಮದ ಆಟೋ ಚಾಲಕ ರಾಜೇಶ್ ಎಂಬವರಿಗೆ ವ್ಯಕ್ತಿಯೋರ್ವರು ಬಾಡಿಗೆ ರೂಪದಲ್ಲಿ ನಕಲಿ ನೋಟನ್ನು ನೀಡಿರುವ ಘಟನೆ ಶುಕ್ರವಾರದಂದು ವರದಿಯಾಗಿದೆ.
ರಾಜೇಶ್ ಅವರು ಇಂದು ಬೆಳಗ್ಗೆ ಹಣ ಲೆಕ್ಕ ಮಾಡುತ್ತಿದ್ದ ಸಂದರ್ಭ ನೂರು ರೂಪಾಯಿ ನೋಟಿನಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಜೊತೆಗೆ ನೋಟು ಮುದ್ರಿತವಾಗಿರುವ ಕಾಗದದ ಬಗ್ಗೆ ಕೂಡಾ ಪರಿಶೀಲನೆ ನಡೆಸಿದಾಗ ಅದು ಜೆರಾಕ್ಸ್ ನೋಟು ಎಂದು ತಿಳಿದುಬಂದಿದೆ. ತಕ್ಷಣವೇ ಬಾಡಿಗೆ ನೀಡಿದ ವ್ಯಕ್ತಿಯ ಜೊತೆ ವಿಚಾರಿಸಿದಾಗ ತನಗೆ ಕೋಡಿಂಬಾಳದ ಕೋಳಿ ಅಂಗಡಿಯಿಂದ ಕೋಳಿ ಖರೀದಿಸಿದಾಗ ಅದರ ಮಾಲೀಕ ನೀಡಿದ್ದ ಬಾಕಿ ಹಣವನ್ನು ಬಾಡಿಗೆ ರೂಪದಲ್ಲಿ ನೀಡಿರುವುದಾಗಿ ತಿಳಿಸಿದ್ದಾನೆ. ಇದರಿಂದ ಇನ್ನಷ್ಟು ಅನುಮಾನಗೊಂಡ ಆಟೋ ಚಾಲಕ ಕಡಬ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಎಸ್ಐ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ, ಆಟೋ ಚಾಲಕ ಹಾಗೂ ಬಾಡಿಗೆದಾರ ವ್ಯಕ್ತಿಯನ್ನು ಠಾಣೆಗೆ ಕರೆದು ಮಾಹಿತಿ ಪಡೆದು ಕೋಡಿಂಬಾಳದ ಕೋಳಿ ಅಂಗಡಿಯ ಮಾಲೀಕನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ. ಬಳಿಕ ನಕಲಿ ನೋಟನ್ನು ಹೆಚ್ಚಿನ ಪರಿಶೀಲನೆಗಾಗಿ ಕೊಂಡೊಯ್ದಿದ್ದು, ಇದರ ಹೆಚ್ಚುವರಿ ನೋಟುಗಳು ಇಲ್ಲಿ ಚಲಾವಣೆಗೊಂಡಿದೆ. ಇದು ಯಾರಿಂದ ಬಂದಿರಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.