ಕಡಬ: ಚರ್ಚ್ ಗೋಪುರದ ಶಿಲುಬೆ ತೆಗೆದು ಕೇಸರಿ ಧ್ವಜ ಹಾಕಿದ ಪ್ರಕರಣ ➤ ದಿನಕ್ಕೊಂದು ತಿರುವು | ರಾಜಕೀಯ ಕೆಸರೆರಚಾಟಕ್ಕೆ ಹಾದಿ ಸುಗಮ

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು ಚರ್ಚ್‌ನ ಒಳಗಡೆ ಹನುಮಂತ ದೇವರ ಫೋಟೋ ಇರಿಸಿದ್ದಲ್ಲದೆ ಮೇಲ್ಭಾಗದಲ್ಲಿದ್ದ ಶಿಲುಬೆಯನ್ನು ಒಡೆದು ಕೇಸರಿ ಧ್ವಜವನ್ನು ಅಳವಡಿಸಿರುವ ಘಟನೆ ಕಡಬ ಸಮೀಪದ ಕುಟ್ರುಪ್ಪಾಡಿ ಎಂಬಲ್ಲಿ ಮೇ 01 ರಂದು ನಡೆದಿದ್ದು, ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಕುಟ್ರುಪ್ಪಾಡಿ ಗ್ರಾಮದ ಪೇರಡ್ಕ ಎಂಬಲ್ಲಿರುವ ‘ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್’ ಚರ್ಚ್‌ಗೆ ಮೇ 01 ರಂದು ತಡರಾತ್ರಿ ವೇಳೆಗೆ ಅಪರಿಚಿತ ದುಷ್ಕರ್ಮಿಗಳು ಬಾಗಿಲನ್ನು ಒಡೆದು ಅಕ್ರಮ ಪ್ರವೇಶ ಮಾಡಿ ಕಟ್ಟಡದ ಮೇಲ್ಭಾಗದಲ್ಲಿದ್ದ ಶಿಲುಬೆಯನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಿ ಹಿಂದೂಗಳ ಧ್ವಜವನ್ನು ಅಳವಡಿಸಿರುವುದಲ್ಲದೇ ಚರ್ಚ್‌ನ ಒಳಭಾಗದಲ್ಲಿ ಹಿಂದೂಗಳ ಆರಾಧ್ಯ ದೈವವಾದ ಹನುಮಂತನ ಫೋಟೋವನ್ನು ಇರಿಸಿ, ಚರ್ಚ್‌ನ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಣೆ ಮಾಡಿಟ್ಟಿದ್ದ ಕಪಾಟನ್ನು ಹೊಡೆದು ನಾಶ ಮಾಡಿ, ವಿದ್ಯುತ್‌ ಸಂಪರ್ಕದ ಉದ್ದೇಶಕ್ಕೆ ಅಳವಡಿಸಿದ್ದ ಮೀಟರ್‌ನ್ನು ಹಾಗೂ ನೀರಿನ ಪಂಪನ್ನು ತೆಗೆದುಕೊಂಡು ಹೋಗಿರುತ್ತಾರೆ. ಬುಧವಾರ ರಾತ್ರಿ ವೇಳೆಗೆ ಪುನಃ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್‌ ಕಂಬದಿಂದ ಸರ್ವಿಸ್‌ ವಯರ್‌ಗಳನ್ನು ತುಂಡರಿಸಿರುವುದಾಗಿ ಪಾದ್ರಿ ಫಾ| ಜೋಸ್ ವರ್ಗೀಸ್ ಅವರು ಗುರುವಾರದಂದು ಕಡಬ ಠಾಣೆಗೆ ದೂರು ನೀಡಿದ್ದರು‌.

ಮೇ.03 ರಂದು ಘಟನಾ ಸ್ಥಳಕ್ಕೆ ಹಿಂದೂ ಸಂಘಟನೆಗಳ ಮುಖಂಡರು ಭೇಟಿ ಇಲ್ಲಿ‌ನ ಚರ್ಚ್ ಅಕ್ರಮ ಕಟ್ಟಡವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಈ ಮಧ್ಯೆ ಪ್ರಾರ್ಥನಾ ಮಂದಿರದ ಹತ್ತಿರದ ವಾಸಿ ಎನ್ಕಾಜೆ ಶೋಭರಾಜ್ ಎಂಬವರು ತಹಶೀಲ್ದಾರರಿಗೆ ದೂರು ನೀಡಿದ್ದು, ನನ್ನ ಸ್ವಾಧೀನದ ಜಮೀನಿಗೆ ಅಪರಿಚಿತ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ, ಧಾರ್ಮಿಕ ವಿಧಿ ವಿಧಾನಕ್ಕೆ ತಯಾರು ಮಾಡುತ್ತಿದ್ದಾರೆ. ನನ್ನ ತಂದೆಯವರಿಗೆ ಸದರಿ ಭೂಮಿ ಮಂಜೂರಾಗಿದ್ದು, ನನ್ನ ತಂದೆಯವರ ಮರಣದ ನಂತರ ನಾನು ಮತ್ತು ನನ್ನ ಸಹೋದರಿಯವರ ಜಂಟಿ ಹಕ್ಕಿನ ಸ್ಥಿರಾಸ್ತಿಯಾಗಿರುತ್ತದೆ. ಈ ಸ್ಥಿರಾಸ್ತಿಯಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ನನ್ನ ಕುಟುಂಬ ನಿರ್ವಹಣೆ ಇದರಿಂದ ನಡೆಯುತ್ತಿದೆ. ಈ ಸ್ಥಿರಾಸ್ತಿಗೆ ಅಪರಿಚಿತ ವ್ಯಕ್ತಿಗಳು, ಅನ್ಯ ಧರ್ಮೀಯರು ಬಂದು ಜಾಗವನ್ನು ಅಗೆದು ಸಮತಟ್ಟುಗೊಳಿಸಿ ಕಟ್ಟಡ ಸಾಮಗ್ರಿಗಳನ್ನು ತಂದು ಅನಧಿಕೃತ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Also Read  ಕಾರ್ಮಿಕರಿಗಿದ್ದ ಉಚಿತ ಬಸ್‌ಪಾಸ್‌ ಯೋಜನೆ ಸ್ಥಗಿತ...! - ರಾಜ್ಯ ಸರ್ಕಾರ

ಶುಕ್ರವಾರ ಬೆಳಗ್ಗೆ ವಿವಾದಿತ ಕಟ್ಟಡದ ಆವರಣಕ್ಕೆ ಭೇಟಿ ನೀಡಿದ ಎಸ್‌ಡಿಪಿಐ ಮುಖಂಡರ ತಂಡ, ಹಿಂದೂ ಸಂಘಟನೆಯ ಮೇಲೆ ಗುರುತರ ಆರೋಪ ಮಾಡಿದೆ. ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟೀಸ್ ಮಾತನಾಡಿ, ರಾಜಕೀಯ ಲಾಭಕ್ಕೋಸ್ಕರ ಶಾಂತವಾಗಿದ್ದ ಕಡಬದಲ್ಲಿ ಕೋಮು ಗಲಭೆ ಸೃಷ್ಠಿಸುವ ಉದ್ದೇಶದಿಂದ ಹಿಂದೂ ಸಂಘಟನೆಯವರೇ ಚರ್ಚ್ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಘಟನೆ ನಡೆಯುತ್ತಿದ್ದು, ಇದಕ್ಕೆ ಜಿಲ್ಲಾಡಳಿತವೇ ಹೊಣೆ. ಎಲ್ಲವನ್ನೂ ಅನಧಿಕೃತವೆಂದು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕೋಮು ದ್ವೇಷ ಹರಡುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Also Read  ಶಿರ್ವ: ಪೋಷಕರೊಂದಿಗೆ ಬಟ್ಟೆಯಂಗಡಿಗೆ ಬಂದಿದ್ದ ಬಾಲಕಿ ಬಾವಿಗೆ ಬಿದ್ದು ಮೃತ್ಯು

ಇದೆಲ್ಲದರ ನಡುವೆ ಪುತ್ತೂರು ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕಿ ಗಾನಾ ಪಿ. ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರದ ಪ್ರಮುಖರನ್ನು ವಿಚಾರಣೆ ಮಾಡಿ ಘಟನೆಯ ಬಗ್ಗೆ ವಿವರ ಪಡೆದಿದ್ದಾರೆ‌. ಈ ಸಂದರ್ಭದಲ್ಲಿ ಕಡಬ ಠಾಣಾ ತನಿಖಾ ಎಸ್‌ಐ ಶ್ರೀಕಾಂತ್ ರಾಥೋಡ್, ಗುಪ್ತಚರ ಇಲಾಖಾ ಪೊಲೀಸ್ ಸಿಬ್ಬಂದಿ, ಕಡಬ ಪೋಲೀಸ್ ಸಿಬ್ಬಂದಿಗಳು ಹಾಗೂ ನೂಜಿಬಾಳ್ತಿಲ ಗ್ರಾಮ ಕರಣಿಕ ಮತ್ತಿತರರು ಉಪಸ್ಥಿತರಿದ್ದರು.

ಇದಾದ ಬೆನ್ನಲ್ಲೇ ಸ್ಥಳಕ್ಕೆ ಉಪ್ಪಿನಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top