ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಎಡವಟ್ಟು ➤ ಅಪಘಾತದ ಗಾಯವನ್ನು ಶುಚಿಗೊಳಿಸದೆ ಸ್ಟಿಚ್ ಹಾಕಿ ನಿರ್ಲಕ್ಷ್ಯ

(ನ್ಯೂಸ್ ಕಡಬ) newskadaba.com ಕಡಬ, ಮೇ.06. ಅಪಘಾತದ ವೇಳೆ ಉಂಟಾದ ಗಾಯವನ್ನು ಶುಚಿಗೊಳಿಸದೆ ಹೊಲಿಗೆ ಹಾಕಿದ ಪರಿಣಾಮ ಗಾಯ ಉಲ್ಬಣಗೊಂಡು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಪ್ರಮೇಯ ಉಂಟಾದ ಘಟನೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ರೈಲ್ವೇ ಇಲಾಖೆಯ ಉದ್ಯೋಗಿ ಪುರುಷೋತ್ತಮ ಎಂಬವರು ಎಪ್ರಿಲ್ 25ರಂದು ರಾತ್ರಿ ತನ್ನ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆಂದು ಹೊರಟವರು ಉಂಡಿಲ ಎಂಬಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದು, ಅವರ ಮೊಣ ಕಾಲಿಗೆ ಗಾಯವಾಗಿತ್ತು. ಕೂಡಲೇ ಪುರುಷೋತ್ತಮ ಹಾಗೂ ಅವರ ಪತ್ನಿಯನ್ನು ಸ್ಥಳೀಯರು ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ಸೂಚಿಸಿದ್ದರು. ಬಳಿಕ ದಾದಿಯರು ಹಾಗೂ ಸಿಬ್ಬಂದಿಗಳು ಗಾಯಕ್ಕೆ ಸ್ಟಿಚ್ ಹಾಕಿದ್ದರು. ಗಾಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪುರುಷೋತ್ತಮ ಅವರು ಮೇ.4ರಂದು ಕಡಬದ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಗಾಯದ ಎಕ್ಸರೇ ತೆಗೆಸಿ ತಜ್ಞ ವೈದ್ಯರಿಗೆ ತೋರಿಸಿದ್ದರು. ಎಕ್ಸರೇ ಪರಿಶೀಲಿಸಿದ ವೈದ್ಯರು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ ಮೇರೆಗೆ ಪುರುಷೋತ್ತಮ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸರ್ಜರಿ ನಡೆಸಲಾಗಿದ್ದು ಈ ವೇಳೆ 14 ಕಲ್ಲುಗಳು ದೊರೆತಿದೆ. ಗಾಯವಾದ ಆ ದಿನವೇ ಸ್ಟಿಚ್ ಮಾಡುವಾಗ ಸರಿಯಾಗಿ ಶುಚಿಗೊಳಿಸಿ ಸ್ಟಿಚ್ ಮಾಡುತ್ತಿದ್ದರೆ ಗಾಯ ಉಲ್ಬಣಗೊಳ್ಳುವ ಪ್ರಮೇಯ ಉಂಟಾಗುತ್ತಿರಲಿಲ್ಲ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Also Read  ಬಿಎಸ್ ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನ

 

 

error: Content is protected !!
Scroll to Top