ಕಡಬ: ಅಪರೂಪದ ಬೃಹತ್ ಶಿಲಾಯುಗ ಸಮಾಧಿ ಪತ್ತೆ ➤ ನಿಧಿಗಳ್ಳರ ಪಾಲಾಯಿತೇ ಸಮಾಧಿಯ ಅವಶೇಷ..

(ನ್ಯೂಸ್ ಕಡಬ) newskadaba.com ಕಡಬ, ಎ.25. ಅಪರೂಪದ ಬೃಹತ್ ಶಿಲಾಯುಗದ ಸಮಾಧಿಯೊಂದು ಕಡಬದಲ್ಲಿ ಪತ್ತೆಯಾಗಿದೆ.

ಇಂತಹ ಒಂದು ಅಪರೂಪದ ಗುಹಾ ಸಮಾಧಿಯು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ಸರ್ಕಾರಿ ಗೇರುಬೀಜದ ತೋಟದಲ್ಲಿ ಕಂಡು ಬಂದಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಗುಹಾ ಸಮಾಧಿಗಳು, ಬೃಹತ್ ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳಾಗಿದ್ದು, ಸಮಾಧಿಯ ಮಧ್ಯಭಾಗದಲ್ಲಿ ಸುಮಾರು ಎರಡರಿಂದ ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದ ವರೆಗೆ ಸಿಲಿಂಡಿರ್ ಆಕಾರದಲ್ಲಿ ಕೆಂಪು ಮುರಕಲ್ಲಿನ ಭೂಪಾತಳಿಯಲ್ಲಿ ಕೊರೆಯಲಾಗಿದೆ. ಇದರ ಕೆಳಭಾಗದಲ್ಲಿ ಅರ್ಧಗೋಳಾಕೃತಿಯ ಗುಹೆಯನ್ನು ಅಗತ್ಯವಾದ ಆಳ ಹಾಗೂ ಸುತ್ತಳತೆಯೊಂದಿಗೆ ಅಗೆದು ರಚಿಸಲಾಗಿದ್ದು, ಇದು ಬಹುತೇಕ ಬೌದ್ಧ ಧರ್ಮದ ಸ್ಥೂಪಗಳ ರಚನೆಯನ್ನು ಹೋಲುತ್ತದೆ. ಕರ್ನಾಟಕದ ಕರಾವಳಿಯಲ್ಲಿ ಇಂತಹ ರಚನೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕೇರಳದಲ್ಲಿ, ಗುಹಾ ಸಮಾಧಿಗಳ ಪಾಶ್ರ್ವದಲ್ಲಿ ಒಂದು ಪ್ರವೇಶದ್ವಾರ ಇರುತ್ತದೆ. ಈ ಪ್ರವೇಶದ್ವಾರವನ್ನು ಆಯತಾಕಾರದಲ್ಲಿ ಬಾಗಿಲ ದಾರಂದಂತೆ ರಚಿಸಲಾಗಿರುತ್ತದೆ. ಆದರೆ, ಎರಡೂ ಕಡೆ ಸಮಾಧಿಯ ಮಧ್ಯಭಾಗದಲ್ಲಿ ಎರಡು ಅಥವಾ ಮೂರು ಅಡಿಯ ವ್ಯಾಸದ ರಂಧ್ರ ಸಾಮಾನ್ಯವಾಗಿ ಕಂಡು ಬರುತ್ತದೆ.

Also Read  ಕರ್ತವ್ಯದಲ್ಲಿದ್ದ ವೇಳೆ ದಿಢೀರ್ ಅಸ್ವಸ್ಥ ➤ ಕೊಣಾಜೆ ಠಾಣಾ ಹೆಡ್ ಕಾನ್ಸ್ಟೇಬಲ್, ಸವಣೂರು ಮೂಲದ ಜಗನ್ನಾಥ್ ನಿಧನ

ಸಾಮಾನ್ಯವಾಗಿ, ಬೃಹತ್ ಶಿಲಾಯುಗದ ಸಮಾಧಿಗಳ ಇರುವನ್ನು ಗುರುತಿಸಲು, ಆ ಕಾಲದಲ್ಲಿ ಸಮಾಧಿಯ ಮೇಲೆ ಅಥವಾ ಸಮಾಧಿಯ ಸಮೀಪದಲ್ಲಿ, ದೊಡ್ಡ, ದೊಡ್ಡ ಕಲ್ಲಿನ ಕಂಭಗಳನ್ನು ನಿಲ್ಲಿಸುತ್ತಿದ್ದರು, ಇಲ್ಲವೇ, ಸಮಾಧಿಯ ಮೇಲ್ಭಾಗದಲ್ಲಿ ದೊಡ್ಡ, ದೊಡ್ಡ ಕಾಡು ಕಲ್ಲುಗಳ ಶಿಲಾ ವರ್ತುಲವನ್ನು ರಚಿಸುತ್ತಿದ್ದರು, ಕೆಲವು ಕಡೆ ಸಮಾಧಿಯ ಮೇಲೆ ಕಲ್ಲುಗಳ ರಾಶಿಯನ್ನು ಹೇರಿ, ಕಲ್ಗುಪ್ಪೆಗಳನ್ನು ನಿರ್ಮಿಸಿ ಸಮಾಧಿಗಳ ಇರುವನ್ನು ನಿರ್ದೇಶಿಸಲಾಗಿದೆ. ಆದರೆ, ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದು ದೊಡ್ಡ ವೃತ್ತವನ್ನು ಕೆಂಪು ಮುರಕಲ್ಲಿನ ಮೇಲೆ ರಚಿಸಿ, ಸಮಾಧಿಯ ಇರುವನ್ನು ಗುರುತಿಸಿರುವುದು ಕಡಬದ ಗುಹಾ ಸಮಾಧಿಯ ವಿಶೇಷತೆಯಾಗಿದೆ. ಆ ವೃತ್ತದ ಕೆಳಭಾಗದಲ್ಲಿ ಆ ವೃತ್ತದ ವಿಸ್ತಾರಕ್ಕೆ ಅನುಗುಣವಾಗಿ ಗುಹೆಯನ್ನು ರಚಿಸಲಾಗಿದೆ. ಆ ವೃತ್ತದ ವಿಸ್ತಾರ ಸುಮಾರು ಏಳು ಅಡಿಯಾಗಿದ್ದು, ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ. ಕೇರಳ ಮತ್ತು ಕರ್ನಾಟಕದ ಗುಹಾ ಸಮಾಧಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಂಧ್ರ, ಕಡಬದ ಗುಹಾ ಸಮಾಧಿಯಲ್ಲಿಲ್ಲ. ಆದ್ದರಿಂದ, ಕಡಬದ ಸಮಾಧಿ ಒಂದು ಅಪರೂಪದ ಹೊಸ ಮಾದರಿಯಾಗಿದೆ. ಗುಹೆಯ ಮಧ್ಯಭಾಗದಲ್ಲಿ ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದ್ದು, ಇದೂ ಸಹ ಒಂದು ವಿಶೇಷ ಅಂಶವಾಗಿದೆ. ಸಮಾಧಿಯನ್ನು ಪೂವೊತ್ತೀರ ದಿಕ್ಕಿಗೆ ಅಭಿಮುಖವಾಗಿ ರಚಿಸಲಾಗಿದೆ. ಗುಹೆಯ ಒಳಭಾಗದಲ್ಲಿ ಅತ್ಯಲ್ಪ ಪ್ರಮಾಣದ ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆಯ ಚಿಕ್ಕ, ಚಿಕ್ಕ ಚೂರುಗಳು ಕಂಡು ಬಂದಿವೆ. ಬಹುಶಃ ಸಮಾಧಿಯ ಅವಶೇಷಗಳನ್ನು ನಿಧಿಗಳ್ಳರು ದೋಚಿರುವಂತೆ ಕಂಡು ಬರುತ್ತದೆ. ಈ ಸಮಾಧಿ ಅಧ್ಯಯನದ ಸಂಧರ್ಭದಲ್ಲಿ ನಿಶ್ಚಿತ್ ಗೋಳಿತ್ತಡಿ, ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್ ನ ಮಾಲೀಕರಾದ ಯೂಸೂಫ್ ಹೈದರ್ ಹಾಗೂ ಈ ಸಮಾಧಿಯನ್ನು ಬೆಳಕಿಗೆ ತರುವಲ್ಲಿ ವಿದ್ಯಾರ್ಥಿಗಳಾದ ಶ್ರೇಯಸ್, ಗೌತಮ್, ಶಾರೀಕ್, ಕಾರ್ತಿಕ್, ವಿಶಾಲ್ ರೈ ಮತ್ತು ದಿಶಾಂತ್ ಸಹಕರಿಸಿದ್ದಾರೆ.

Also Read  ರಸ್ತೆ ಸಂಚಾರಗಣತಿ

 

error: Content is protected !!
Scroll to Top