(ನ್ಯೂಸ್ ಕಡಬ) newskadaba.com ಕಡಬ, ನ.09. ಇಲ್ಲಿನ ಬಂಟ್ರ ಗ್ರಾಮದ ಚಾಕೋಟೆಕರೆ ಎಂಬಲ್ಲಿ ಕಾನೂನು ಬಾಹಿರವಾಗಿ ಬಾರ್ & ರೆಸ್ಟೋರೆಂಟನ್ನು ತೆರೆಯಲಾಗಿದ್ದು, ವಾರದೊಳಗೆ ಪರವಾನಿಗೆಯನ್ನು ರದ್ದುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಡಬ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಎ.ಬಿ. ಮನೋಹರ್ ರೈ ಹೇಳಿದ್ದಾರೆ.
ಅವರು ಗುರುವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಬಕಾರಿ ಕಾನೂನಿನಲ್ಲಿ ಮದ್ಯದಂಗಡಿಯು ರಾಜ್ಯ ಹೆದ್ದಾರಿಯಿಂದ 220 ಮೀಟರ್ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಕಾಲನಿಯಿಂದ 100 ಮೀಟರ್ ದೂರದಲ್ಲಿರಬೇಕೆಂಬ ನಿಯಮವಿದ್ದರೂ, ಚಾಕೋಟೆಕರೆಯಲ್ಲಿ ಪರಿಶಿಷ್ಟ ಜಾತಿ ಕಾಲನಿಯಿಂದ ಕೇವಲ 20 ಮೀಟರ್ ದೂರದಲ್ಲಿ ಮದ್ಯದಂಗಡಿಯನ್ನು ಆರಂಭಿಸಲಾಗಿದೆ. ರೆಸ್ಟೋರೆಂಟನ್ನು ತೆರೆಯಲು ಮರ್ಧಾಳ ಗ್ರಾಮ ಪಂಚಾಯತ್ ಇಷ್ಟರವರೆಗೆ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ. ರಾಜ್ಯ ಹೆದ್ದಾರಿಯಿಂದ 180 ಮೀಟರ್ ಒಳಗಡೆ ಇರುವುದರಿಂದ ಕಾನೂನು ಬಾಹಿರವಾಗಿ ಪರವಾನಿಗೆಯನ್ನು ನೀಡಲಾಗಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಸುಮಾರು 40 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಕೂಗಳತೆಯ ದೂರದಲ್ಲಿ ಮಸೀದಿ ಇದೆ. ಈಗಾಗಲೇ ಕಡಬ ತಾಲೂಕಿನ ಅಗ್ನಿಶಾಮಕ ಕಛೇರಿಯನ್ನು ಮುಂಚಿಕಾಪು ಎಂಬಲ್ಲಿ ಕಾದಿರಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದು, ಇದು ಅನುಷ್ಠಾನವಾದಲ್ಲಿ ಮದ್ಯದಂಗಡಿಯಿಂದ 100 ಮೀಟರ್ ವ್ಯಾಪ್ತಿಯೊಳಗಡೆ ಬರುತ್ತದೆ. ಆದ್ದರಿಂದ ಇಲ್ಲಿ ಮದ್ಯದಂಗಡಿ ಇರುವುದು ಕಾನೂನು ಬಾಹಿರ ಎಂದರು.
ಮದ್ಯದಂಗಡಿಯನ್ನು ವಿರೋಧಿಸಿ ಹೋರಾಟ ನಡೆಸಿರುವುದಕ್ಕೆ ಮದ್ಯದಂಗಡಿ ಮಾಲಕರ ಬೆಂಬಲಿಗರೆನ್ನಲಾದ ಕೆಲವರು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಮರ್ಧಾಳ ಜುಮಾ ಮಸೀದಿಯ ಉಪಾಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್ ಚಾಕಟೆಕರೆ, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ ಮೇಲ್ವಿಚಾರಕ ರಾಜು ಗೌಡ, ಮರ್ಧಾಳ ಗ್ರಾ.ಪಂ. ಸದಸ್ಯ ಅಬೂಬಕ್ಕರ್ ಅಚ್ಚಿಲ, ಪ್ರಮುಖರಾದ ದೀಕ್ಷಿತ್ ರೈ ದೋಳ, ಉಮೇಶ್ ಹೊಸಮನೆ, ತೀರ್ಥೇಶ್ ಕೋಡಂದೂರು, ಹೈದರ್ ಸಿ.ಎಂ. ಮೊದಲಾದವರು ಉಪಸ್ಥಿತರಿದ್ದರು.