ಪಂಜರದ ಪಕ್ಷಿಗೆ ಕೊನೆಗೂ ಮುಕ್ತಿ ➤ ರಸ್ತೆಯಿಂದ ಕಾಡಿನತ್ತ ಸರಿದ ಅಪಾಯಕಾರಿ ಕ್ರೇನ್

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಹೆದ್ದಾರಿ ಮಧ್ಯೆ ಸುಮಾರು ಒಂದೂವರೆ ವರ್ಷದಿಂದ ಕೆಟ್ಟು ನಿಂತಿದ್ದ ಕ್ರೇನ್ ನ್ನು ಕೊನೆಗೂ ಪಕ್ಕಕ್ಕೆ ಸರಿಸಲಾಗಿದೆ.

ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಭಕ್ತರಿಗೆ ಹಾಗೂ ಈ ರಸ್ತೆಯಲ್ಲಿ ಹಾದುಹೋಗುವ ವಾಹನ ಸವಾರರಿಗೆ ಈ ಕ್ರೇನ್ ರಸ್ತೆ ಅಂಚಿನಲ್ಲಿ ಕೆಟ್ಟುನಿಂತ ಪರಿಣಾಮ ಹಲವು ಸಮಸ್ಯೆ ಆಗುತಿತ್ತು. ಅಲ್ಲದೆ ಅದೆಷ್ಟೋ ಅಪಘಾತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿತ್ತು. ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಮಾಧ್ಯಮಗಳು ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದವು. ಒಂದೆಡೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕ್ರೇನ್ ನಿಂದಾಗಿ ಆಗುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಇದರ ಬಗ್ಗೆ ಗಣೇಶ್ ಅನಿಲ ಬರೆದ ವ್ಯಂಗ್ಯಭರಿತ ಕಥೆ, ‘ನ್ಯೂಸ್ ಕಡಬ’ದಲ್ಲಿ ವೈರಲ್ ಆಗುವುದರ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು. ನಂತರ ಐತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪರಿಣಾಮ ಮನವಿಗೆ ಸ್ಪಂದಿಸಿದ ಕಡಬ ತಹಶೀಲ್ದಾರ್ ಅನಂತ ಶಂಕರ ಅವರ ಮುಂದಾಳತ್ವದಲ್ಲಿ ಕ್ರೇನ್ ಅನ್ನು ಪಕ್ಕದ ಗುಡ್ಡದಲ್ಲಿ 2 ಹಿಟಾಚಿ ಬಳಸಿ ಸಮತಟ್ಟು ಮಾಡಿ ರಸ್ತೆಯಿಂದ ಪಕ್ಕಕ್ಕೆ ಸರಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯಿತು.


ಕ್ರೇನ್ ಸುಮಾರು 60ಟನ್ ಭಾರ ವಿದ್ದು, ಇದರ ತೆರವು ಬಹಳ ಸವಾ ಲಾಗಿದ್ದು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್ ಕೆ. ಕೆ ಇವರ ಮಾರ್ಗದರ್ಶನದಂತೆ 2 ಕ್ರೇನ್ ಹಾಗೂ 2 ಹಿಟಾಚಿ ಬಳಸಿ ತೆರವು ಮಾಡಲಾಯಿತು. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ, ಸಿಬ್ಬಂದಿಗಳು, ಕಡಬ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮನಾಯ್ಕ್ ಹಾಗೂ ಸಿಬ್ಬಂದಿಗಳು, ಸ್ಥಳೀಯರಾದ ಸತೀಶ್ ಪೂಜಾರಿ ಕೊಡೆಂಕೀರಿ, ತೀರ್ಥೇಶ್ ಮರ್ಧಾಳ, ನಾಗೇಶ್ ಅನಿಲ, ನವೀನ್ ಕಲ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

Also Read  ಬಜಾಲ್ ವಾರ್ಡಿನ ಅಭಿವೃದ್ದಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

 

 

 

error: Content is protected !!
Scroll to Top