(ನ್ಯೂಸ್ ಕಡಬ) newskadaba.com ಕಡಬ, ಮಾ.23. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿ ಸುಮಾರು ಒಂದೂವರೆ ವರ್ಷದಿಂದ ರಸ್ತೆಯಲ್ಲೇ ಕೆಟ್ಟು ನಿಂತಿರುವ ಬೃಹತ್ ಕ್ರೇನ್ ನ್ನು ತೆರವುಗೊಳಿಸುವಂತೆ ಐತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕೆ. ಅವರ ನೇತೃತ್ವದಲ್ಲಿ ಕಡಬ ತಹಶೀಲ್ದಾರ್ ಹಾಗೂ ಪೊಲೀಸ್ ಉಪ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬದಿಯ ತಿರುವಿನಂಚಿನಲ್ಲಿ ಕ್ರೇನ್ ಕೆಟ್ಟು ನಿಂತು ಒಂದೂವರೆ ವರ್ಷಗಳಾಗಿದ್ದು, ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಹಲವು ಬಾರಿ ಕೂದಲೆಲೆಯ ಅಂತರದಲ್ಲಿ ಭಾರೀ ಅನಾಹುತ ತಪ್ಪಿದ್ದು, ಅಲ್ಲದೆ ಕೆಲವು ಬೈಕ್ ಸವಾರರು ಬಿದ್ದು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಮೌಖಿಕವಾಗಿ ದೂರು ನೀಡಿದ್ದು ಹಾಗೂ ದಿನಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಪ್ರಕಟಗೊಂಡಿದ್ದರೂ ಯಾವುದೇ ಪರಿಹಾರವಾಗಿರುವುದಿಲ್ಲ. ಆದ್ದರಿಂದ ಕೂಡಲೇ ರಸ್ತೆ ಸುರಕ್ಷತಾ ಕಾನೂನಿನಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಕ್ರೇನ್‌ನ್ನು ತೆರವುಗೊಳಿಸಿ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗುವ ಪ್ರಯಾಣಿಕರ ವಾಹನಗಳಿಗೆ ಸುರಕ್ಷಿತವಾಗಿ ಸಂಚಾರ ಮಾಡಲು ಅನುವು ಕೊಡುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಲತೀಫ್, ಮೇದಪ್ಪ, ಹೈದರ್ ಹಿಂದುಸ್ತಾನ್, ಸುರೇಶ್ ನೈಲ, ಜಲೀಲ್, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.