ಕಡಬ: ಪುನೀತ್ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ ಹಾಗೂ ರಸ್ತೆ ನಾಮಫಲಕ ಅನಾವರಣ

(ನ್ಯೂಸ್ ಕಡಬ) newskadaba.com ಕಡಬ, ಮಾ. 14. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿ ತಿಂಗಳುಗಳೇ ಕಳೆದರೂ ಕೂಡಾ ಅವರ ನೆನಪು ಮಾತ್ರ ಇನ್ನೂ ಜನರ ಮನಸಿನಲ್ಲಿ ಅಚ್ಛಳಿಯದೇ ಉಳಿದಿದ್ದು, ಈ ಅದ್ಭುತ ಕಲಾವಿದನ ಸವಿನೆನಪಿಗಾಗಿ ಇಚ್ಲಂಪಾಡಿ ಗ್ರಾಮದ ರಸ್ತೆಯೊಂದಕ್ಕೆ ಪುನೀತ್‌ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.


ಇಚ್ಲಂಪಾಡಿಯ ಪುನೀತ್‌ರಾಜ್ ಕುಮಾರ್ ಅಭಿಮಾನಿ ಬಳಗವು ಈ ನಿರ್ಧಾರ ಕೈಗೊಂಡಿದ್ದು, ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಮಡಿಪು-ಮಾನಡ್ಕ ರಸ್ತೆಗೆ ಪುನೀತ್‌ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣ ಮಾಡಲಾಗಿದೆ. ಬೆಂಗಳೂರಿನ ಖ್ಯಾತ ಉದ್ಯಮಿ ನಾಭಿರಾಜ್ ಜೈನ್‌ ನಾಮಫಲಕ ಉದ್ಘಾಟಿಸಿದರು. ಅಲ್ಲದೇ ಬ್ಲಡ್ ಡೋನರ್ಸ್ ಮಂಗಳೂರು, ಲಯನ್ಸ್ ಕ್ಲಬ್ ಮಂಗಳೂರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಇಚ್ಲಂಪಾಡಿ ಶಾಲೆಯಲ್ಲಿ ಪುನೀತ್ ಅಭಿಮಾನಿ ಬಳಗದವರಿಂದ ರಕ್ತದಾನ ಶಿಬಿರವೂ ನಡೆಯಿತು. ನಂತರ ರಾತ್ರಿ ಸಪ್ತಸ್ವರಂ ಮ್ಯೂಸಿಕ್ಸ್ ಇಚ್ಲಂಪಾಡಿ ಇವರ ನೇತೃತ್ವದಲ್ಲಿ ಪುನೀತ್ ಸ್ಮರಣಾರ್ಥ ಪುನೀತ್ ನಮನ ಎಂಬ ರಸಮಂಜರಿ ಕಾರ್ಯಕ್ರಮವನ್ನು ಕೂಡಾ ನಡೆಸಲಾಯಿತು.

Also Read  ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top