ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿ ಮುಂದುವರಿದ ಕಳ್ಳರ ಕೈಚಳಕ- ಒಂದೇ ದಿನ ಮೂರು ಪ್ರಕರಣ ➤ ಮಹಿಳೆಯ ಚಿನ್ನಾಭರಣ, ವಿದ್ಯಾರ್ಥಿನಿಯರ ಮೊಬೈಲ್ ಕದ್ದೊಯ್ದ ಕಳ್ಳರು..!!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 08. ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಓರ್ವ ಮಹಿಳೆಯ ಕತ್ತಿನಲ್ಲಿದ್ದ ಐದೂವರೆ ಪವನ್ ತೂಕದ ಚಿನ್ನಾಭರಣ ಮತ್ತು ಬಸ್ ನಲ್ಲಿ ಸಂಚರಿಸುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೊಬೈಲ್ ಕಳವುಗೈದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ಖಾಲಿದ್ ಎಂಬವರ ಪತ್ನಿ ಝರೀನಾ ಎಂಬವರು ತನ್ನಿಬ್ಬರು ಮಕ್ಕಳೊಂದಿಗೆ ಉಪ್ಪಿನಂಗಡಿ ಬಸ್ ನಲ್ಲಿ ಇಳಿಯುತ್ತಿದ್ದಂತೆಯೇ ಕತ್ತಿನಲ್ಲಿದ್ದ ಐದೂವರೆ ಪವನ್ ಚಿನ್ನದ ನೆಕ್ಲೆಸ್ ಕಾಣೆಯಾಗಿದ್ದು, ಈ ಕುರಿತು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಇದೇ ಸಂದರ್ಭ ಸೋಮವಾರ ಬೆಳಗ್ಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೊಬೈಲ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯರು ಉಪ್ಪಿನಂಗಡಿ ಠಾಣೆಗೆ ದೂರು ದಾಖಲಿಸಿದ್ದಾರೆ. ಇದರ ನಡುವೆಯೇ ರಂಜಿತ್ ಎಂಬಾತ ತನ್ನ ಅಂಗಡಿಯಿಂದ ಒಂದು ಮೊಬೈಲ್ ಕಳವಾಗಿರುವ ಕುರಿತು ದೂರಿನಲ್ಲಿ ತಿಳಿಸಿದ್ದಾರೆ. ಈ ರೀತಿ ಸೋಮವಾರದಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಕಳ್ಳರ ತಂಡವೊಂದು ಸಕ್ರಿಯವಾಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಕಳ್ಳರನ್ನು ಮಟ್ಟಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Also Read  ಕುಕ್ಕೆ ಸುಬ್ರಹ್ಮಣ್ಯ; ಮಾಸ್ಟರ್ ಪ್ಲಾನ್ ಯೋಜನೆಯ ಕಾಮಗಾರಿ ಉದ್ಘಾಟನೆ ದಿನಾಂಕ ಫಿಕ್ಸ್

error: Content is protected !!
Scroll to Top