(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 03. ಕ್ರಿಶ್ಚಿಯನ್ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಸೈಂಟ್ ಬ್ರಿಜಿಡ್ಸ್ ಚರ್ಚ್ ವತಿಯಿಂದ ಸುಳ್ಯದ ಜ್ಯೋತಿ ವೃತ್ತದ ಬಳಿ ಕ್ರಿಶ್ಚಿಯನ್ ಬಾಂಧವರಿಂದ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪ್ರತಿಭಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಸುಳ್ಯ ಸೈಂಟ್ ಬ್ರಿಜೆಡ್ಸ್ ಚರ್ಚ್‌ನ ಫಾದರ್ ವಿಕ್ಟರ್, ಮತಾಂತರದ ವಿಚಾರದಲ್ಲಿ ನಮ್ಮ ಸುಮದಾಯದವರ ಮೇಲೆ ಆರೋಪ ಹೊರಿಸಿ ಹಲ್ಲೆ ನಡೆಸಲಾಗುತ್ತಿದೆ. ನಮ್ಮಲ್ಲಿ ಸಹಾಯ ಕೇಳಿಬರುವ ಬಡವರಿಗೆ ಸಹಾಯ ನೀಡಲು ಭಯಪಡುವಂತಹ ಕಾಲ ಬಂದಿದೆ. ಅಲ್ಲದೇ ಸಹಾಯ ನೀಡಲು ಮುಂದಾದರೆ ಆಮಿಷ ತೋರಿಸಿ ಮತಾಂತರ ಮಾಡುತ್ತಿದ್ದಾರೆ ಎಂದೂ ಆರೋಪಿಸಲಾಗುತ್ತದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿ ದೇಶದ ಸಂವಿಧಾನದಲ್ಲಿ ನೀಡಿರುವ ಧರ್ಮದ ಹಕ್ಕನ್ನು ಕಸಿಯುವ ಮೂಲಕ ಕ್ರಿಶ್ಚಿಯನ್ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದೀಗ ನಾವು ನಮ್ಮ ಚರ್ಚ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ಮೂಲಕ ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.