(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 24. ಕೊರೋನಾ ಸೋಂಕಿನ ಹಿನ್ನೆಲೆ ಕರ್ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಬೇಸಿಗೆ ರಜೆಯಲ್ಲಿ ಕಡಿತ ಮಾಡಿ ಏಪ್ರಿಲ್ 10 ರಿಂದ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಿದ್ದು, ಮೇ16 ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಲು ತೊಡಕುಂಟಾಗಿದ್ದು, ಇದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು ಹದಿನೈದು ದಿನಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ ಎಪ್ರಿಲ್ 9 ಕ್ಕೆ ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಎಪ್ರಿಲ್ 10 ರಿಂದಲೇ ಬೇಸಿಗೆ ರಜೆ ಆರಂಭವಾಗಲಿದೆ. ಮೇ. 16ರಿಂದ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯಲಿದೆ.