ಪುತ್ತೂರಿನಲ್ಲಿ ಖಾಸಗಿ ಪರೀಕ್ಷಾ ಕೇಂದ್ರ ಪ್ರಾರಂಭ ➤ SSLC ಮೌಲ್ಯಮಾಪನ ಕೇಂದ್ರ ಪ್ರಾರಂಭಿಸಲು ಸಮ್ಮತಿ..!

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 17. ಪುತ್ತೂರು ಉಪವಿಭಾಗದ ನಾಲ್ಕು ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಪುತ್ತೂರಿನಲ್ಲಿ ತೆರೆಯಲು ಗ್ರೀನ್ ಸಿಗ್ನಲ್ ದೊರೆತಿದ್ದು, ಇದರ ಜೊತೆಗೆ ಮೌಲ್ಯಮಾಪನ ಕೇಂದ್ರದ ಪ್ರಾರಂಭಕ್ಕೆ ಒಪ್ಪಿಗೆ ದೊರೆಯುವುದಷ್ಟೇ ಬಾಕಿಯಿದೆ.


ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಖಾಸಗಿಯಾಗಿ ಬರೆಯಲು ಅವಕಾಶವಿದ್ದು, ಈವರೆಗೆ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿಯ ವಿದ್ಯಾರ್ಥಿಗಳು ಮಂಗಳೂರಿಗೆ ತೆರಳಿ ಬರೆಯಬೇಕಿತ್ತು. ಆದರೆ ಈ ಸಲ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ಮಂಜೂರು ಮಾಡಲಾಗಿದ್ದು, ಪುತ್ತೂರಿನ ತೆಂಕಿಲ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ತೆರೆಯಲಾಗಿದೆ. ಇನ್ನುಮುಂದೆ ನಾಲ್ಕು ತಾಲೂಕಿನ ವಿದ್ಯಾರ್ಥಿಗಳು ಪುತ್ತೂರಿನಲ್ಲಿ ಪರೀಕ್ಷೆ ಬರೆಯಬಹುದು.

ಕಳೆದ ವರ್ಷ ಪುತ್ತೂರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ನಡೆಸಲು ಪ್ಲಾನ್ ಮಾಡಲಾಗಿತ್ತಾದರೂ ಕೊರೋನಾ ಹಿನ್ನೆಲೆ ಅಸಾಧ್ಯವಾಗಿತ್ತು. ಈ ಬಾರಿ ಯಾವುದೇ ಸಮಸ್ಯೆಯಿಲ್ಲದೇ ಪರೀಕ್ಷೆ ನಡೆಯುವ ನಿರೀಕ್ಷೆಯಿದ್ದು, ಪುತ್ತೂರಿನಲ್ಲಿ ಮೌಲ್ಯಮಾಪನ ಕೇಂದ್ರ ಪ್ರಾರಂಭಗೊಳ್ಳಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಿದ್ದ ಹಿನ್ನೆಲೆ ಎಲ್ಲಾ ತಾಲೂಕಿನ ಮೌಲ್ಯಮಾಪನ ಅಲ್ಲೇ ನಡೆಯುತ್ತಿತ್ತು. ಇದೀಗ ಪುತ್ತೂರಿನಲ್ಲಿ ಕೇಂದ್ರ ಆರಂಭವಾದ ಮೇಲೆ ಸುಳ್ಯ, ಕಡಬ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಮೌಲ್ಯಮಾಪಕರು ಪುತ್ತೂರಿನಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾವ ಜಿಲ್ಲೆಯ ಉತ್ತರಪತ್ರಿಕೆಯ ಮೌಲ್ಯ ಮಾಪನ ಪುತ್ತೂರಿನಲ್ಲಿ ನಡೆಯಲಿದೆ ಎನ್ನುವ ಕುರಿತು ಇಲಾಖೆಯ ನಿರ್ಧಾರದ ಬಳಿಕ ಸ್ಪಷ್ಟವಾಗಲಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮೂಲ ಸೌಕರ್ಯಗಳ ಲಭ್ಯತೆಯ ಬಗ್ಗೆ ವರದಿ ನೀಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಪುತ್ತೂರಿನಿಂದ ನಾಲ್ಕು ಕೇಂದ್ರಗಳ ಹೆಸರನ್ನು ಕಳುಹಿಸಲಾಗಿತ್ತು. ಅದರಲ್ಲಿ ಸುದಾನ ಶಾಲೆ ಹಾಗೂ ವಿವೇಕಾನಂದ ಶಾಲೆಯನ್ನು ಅಂತಿಮವಾಗಿರಿಸಲಾಗಿದೆ.

Also Read  ಗೃಹರಕ್ಷಕರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ

error: Content is protected !!
Scroll to Top