ಕೊಯಿಲ ಗೋಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ➤ ಡಾ. ರಾಜೇಂದ್ರ ಕೆ.ವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 15. ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಗೋಶಾಲೆ ನಿರ್ಮಿಸಲು 98.45 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, 36 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

 

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಡುಗಡೆಯಾದ ಅನುದಾನದಲ್ಲಿ ಮೊದಲ ಹಂತವಾಗಿ ಸುಮಾರು 10 ಎಕರೆ ಪ್ರದೇಶದಲ್ಲಿ ಬೇಲಿ ನಿರ್ಮಿಸಿ, ಕೊಳವೆಬಾವಿ ಕೊರೆಯಿಸಿ ಅಗತ್ಯವಿರುವ ಮೇವು ಬೆಳೆಯಲಾಗುವುದು. ಮುಂದಿನ ಹಂತದಲ್ಲಿ ಕೊಟ್ಟಿಗೆಗಳನ್ನು ನಿರ್ಮಿಸಲಾಗುವುದು ಎಂದ ಅವರು, ಜಿಲ್ಲಾ ಗೋಶಾಲೆ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಗೋಶಾಲೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು, ಆ ಉದ್ದೇಶಕ್ಕಾಗಿ ದಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಗುರುತಿಸಲಾಗಿದ್ದು, ಅಲ್ಲಿ ಗೋಶಾಲೆ ತೆರೆಯಲು ಯೋಜನೆ ರೂಪಿಸಲಾಗುತ್ತಿದೆ, ಇದರಿಂದ ಗೋಶಾಲೆಗಳ ನಿರ್ವಹಣೆ ಸುಲಭವಾಗಲಿದೆ ಎಂದು ಹೇಳಿದರು. ಮೊದಲ ಹಂತದಲ್ಲಿ ಕಡಬ ತಾಲೂಕಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರು ತಾಲೂಕಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನಗಳನ್ನು ಗುರುತಿಸಲಾಗಿದೆ. ಈ ದೇವಸ್ಥಾನಗಳಿಗೆ ಅವಶ್ಯವಿರುವ ಜಾಗವನ್ನು ಗೋಶಾಲೆಯ ಉದ್ದೇಶಕ್ಕಾಗಿ ಜಿಲ್ಲಾಡಳಿತದಿಂದ ಮೀಸಲಿಡಲಾಗುವುದು ಎಂದು ಅವರು ತಿಳಿಸಿದರು. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಪರಿಸರ ಸ್ನೇಹಿ ಗೋಶಾಲೆ ತೆರೆಯಲು ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಇದಕ್ಕಾಗಿ ದೇವಸ್ಥಾನದ ಸಮೀಪವಿರುವ ಡೀಮ್ಡ್ ಅರಣ್ಯವನ್ನು ಆಯ್ಕೆ ಮಾಡಲಾಗಿದ್ದು, ಈ ಜಾಗದಲ್ಲಿ ಮರಗಳನ್ನು ಕತ್ತರಿಸದೇ ಅಲ್ಲಿರುವ ಮರಗಳನ್ನು ಬಳಸಿಕೊಂಡು, ಮರಗಳ ನಡುವೆ ನವೀನ ಮಾದರಿಯಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ದಿ ಪಡಿಸಲು ಚಿಂತಿಸಲಾಗಿದ್ದು, ದೇವಸ್ಥಾನದ ಬಳಿಯಲ್ಲಿಯೇ ಗೋಶಾಲೆ ನಿರ್ಮಾಣ ಮಾಡುವುದರಿಂದ ನಿರ್ವಹಣೆಗೆ ಅವಶ್ಯವಿರುವ ಸಂಪನ್ಮೂಲವನ್ನು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಸಂಗ್ರಹಿಸುವುದು ಸುಲಭವಾಗುವುದು. ಇದರಿಂದ ನಿರ್ವಹಣೆಯೂ ಸುಲಭವಾಗಲಿದೆ ಎಂದು ಹೇಳಿದರು.

Also Read  ಭಾರತವು ವಿಶ್ವಕ್ಕೆ ಆಧ್ಯಾತ್ಮದ ಬೆಳಕು ನೀಡಿದೆ ➤ ಸಂಸದ ನಳಿನ್ ಕಮಾರ್ ಕಟೀಲ್

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಟಿ.ಜಿ, ಪಾಲಿಕ್ಲಿನಿಕ್‍ನ ಉಪನಿರ್ದೇಶಕ ಡಾ. ರಾಮಪ್ರಕಾಶ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿನಾರಾಯಣ ಅಸ್ತ್ರಣ್ಣ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರು, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರಾದ ದಿನೇಶ್ ಪೈ ಹಾಜರಿದ್ದರು.

Also Read  ಕಡಬದ SES ಫ್ರೂಟ್ಸ್ & ವೆಜಿಟಬಲ್ಸ್ ನಲ್ಲಿ ಭರ್ಜರಿ 'ಫ್ರೂಟ್ಸ್ ಮೇಳ' ➤ 100 ರೂ.ಗೆ 5 ಕಲ್ಲಂಗಡಿ, ದಾಳಿಂಬೆ ಕೆಜಿಗೆ 40 ರೂ.

 

error: Content is protected !!
Scroll to Top