(ನ್ಯೂಸ್ ಕಡಬ) newskadaba.com ಫೆ. 15. ಸ್ಕಾರ್ಫ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದು, ಇದೀಗ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಹೈ ಸ್ಕೂಲ್ ಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗೆ ಕಿರುಕುಳ ನೀಡುತ್ತಿರುವುದಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರವು ಕೋರ್ಟ್ ಆದೇಶ ದುರ್ಬಳಕೆ ಮಾಡಿಕೊಂಡು ಗೊಂದಲ ಸೃಷ್ಟಿಸುವುದನ್ನು ಮತ್ತು ರಾಜಕೀಯ ಲಾಭ ಪಡೆಯುವುದನ್ನು ಕೂಡಲೇ ನಿಲ್ಲಿಸಬೇಕು. ಮುಸ್ಲಿಮ್ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರನ್ನು ಅಮಾನವೀಯವಾಗಿ ನಡೆಸಿಕೊಂಡು ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ನ್ಯಾಯಾಂಗ ನಿಂದನೆ ಮಾಡಿದ ಶಿಕ್ಷಕರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರಗಿಸಬೇಕು. ಮುಸ್ಲಿಮ್ ಸಮುದಾಯ ಮತ್ತು ಪ್ರಜ್ಞಾವಂತ ನಾಗರಿಕ ಸಮಾಜವು ಈ ರೀತಿಯ ದುರ್ವರ್ತನೆಗಳ ಬಗ್ಗೆ ಪ್ರಬಲವಾಗಿ ಧ್ವನಿ ಎತ್ತಬೇಕು. ಶಾಲೆಗಳಲ್ಲಿ ಇಂತಹ ಅನಾಗರಿಕ ವರ್ತನೆಗಳು ಮುಂದುವರಿದರೆ ಪಾಪ್ಯುಲರ್ ಫ್ರಂಟ್ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಯಾಸಿರ್ ಹಸನ್ ಎಚ್ಚರಿಸಿದ್ದಾರೆ.