(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 07. ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ನೀತಿಯ ವಿರುಧ್ದ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ವತಿಯಿಂದ ಉಪ್ಪಿನಂಗಡಿ ಸರ್ಕಲ್ ಎದುರುಗಡೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೈದಾ ಯೂಸುಫ್, ಹಿಜಾಬ್ ಎಂಬುದು ಮಹಿಳೆಯರ ರಕ್ಷಣೆಯಾಗಿದ್ದು, ಶತ ಶತಮಾನಗಳಿಂದಲೂ ಪಾಲಿಸುತ್ತಾ ಬಂದಿದ್ದೇವೆ. ನಮ್ಮ ಸಂವಿಧಾನ ಸಹ ಆಯಾ ಧರ್ಮದ ಸಂಸ್ಕೃತಿಯಂತೆ ಬದುಕಲು ಅವಕಾಶ ನೀಡುತ್ತಿರುವಾಗ ಕೆಲವು ಕೋಮುವಾದಿ ಶಕ್ತಿಗಳು ವಿದ್ಯಾರ್ಥಿಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ತನ್ನ ರಾಜಕೀಯ ಶಕ್ತಿಯನ್ನು ಬೆಳೆಸುತ್ತಿದೆ. ನಾವೆಲ್ಲರೂ ಹಿಜಾಬ್ ಧರಿಸಿಯೇ ಶಿಕ್ಷಣ ಪಡೆದಿರುವುದು ಆದರೆ ಆ ಸಂದರ್ಭದಲ್ಲಿ ಇಲ್ಲದ ಸಮಸ್ಯೆ ಈಗ ಸೃಷ್ಟಿಸಲು ಹೊರಟಿದ್ದು ಯಾಕಾಗಿ? ಇದರ ದುರುದ್ದೇಶವನ್ನು ನಾವು ಅರ್ಥೈಸಬೇಕಿದೆ. ಹಿಜಾಬ್ ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಬೇಕಾಗಿರುವುದು ಅನಿವಾರ್ಯ. ಅದಕ್ಕಾಗಿ ಶಿಕ್ಷಣವೂ ಬೇಕು ಮತ್ತು ಹಿಜಾಬ್ ಕೂಡಾ ಬೇಕು. ನಿಮ್ಮ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹಕ್ಕನ್ನು ಬಲಿಕೊಡಲಾರೆವು ಎಂದು ಅಕ್ರೋಶ ವ್ಯಕ್ತಪಡಿಸಿದರು. ಅನ್ಯಾಯದ ವಿರುದ್ದ ಸಮಾನಮನಸ್ಕ ಶಕ್ತಿಗಳು ಒಂದಾಗಬೇಕೆಂದು ಆಗ್ರಹಿಸಿದರು.
ಹಿಜಾಬ್ ಧರಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಯಾವುದೇ ತರದ ತೊಂದರೆಯಾಗದ ರೀತಿಯಲ್ಲಿ ತರಗತಿಗೆ ಅವಕಾಶ ನೀಡಬೇಕೆಂದು ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಸಂಚಾಲಕಿ ಫಾಹಿನ ಹೇಳಿದರು ಮತ್ತು ಇವರ ನೇತೃತ್ವದಲ್ಲಿ ಉಪ್ಪಿನಂಗಡಿ ನಾಡ ಕಚೇರಿಗೆ ತೆರಳಿ ಉಪತಹಶೀಲ್ದಾರರಿಗೆ ಮನವಿ ನೀಡುವ ಮೂಲಕ ಆಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಸಹಲ ತುಂಬೆ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಹಿತರಕ್ಷಣಾ ವೇದಿಕೆಯ ಆಶುರಾ, ಮಿಸ್ರಿಯಾ, ಸಮ್ರತ್, ಅನಿಶಾ ಸಂಶಾದ್ ಉಪಸ್ಥಿತರಿದ್ದರು. ಸಾಜಿದ ಹಬೀಬ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.