(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಳ್ಳಬಟ್ಟಿ ಸಾರಾಯಿ ಉತ್ಪಾದನೆ ಮತ್ತು ಸೇವನೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಕಳ್ಳಭಟ್ಟಿ ನಿರ್ಮೂಲನೆ ಮತ್ತು ಅಕ್ರಮ ಹೆಂಡ ತಯಾರಿಕೆ ಹಾಗೂ ವಿಷಪೂರಿತ ಮದ್ಯ ಸೇವನೆಗಳ ನಿರ್ಮೂಲನೆಯ ಬಗ್ಗೆ ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಮೂಲಕ ಸಭೆಯನ್ನು ನಡೆಸಿ ಮಾತನಾಡಿದರು.
ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ತಯಾರಿಕೆ, ಗೇರು ಹಣ್ಣಿನ ಕಳ್ಳಭಟ್ಟಿ ತಯಾರಿಕೆ ಮತ್ತು ವಿಷಪೂರಿತ ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತೆ ಮತ್ತು ರಾಜಸ್ವ ಸೋರಿಕೆಯಾಗದಂತೆ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ, ಅರಣ್ಯಾಧಿಕಾರಿಗಳು ಮತ್ತು ಸಂಬಂಧಿಸಿದ ಇತರೆ ಅಧಿಕಾರಿಗಳು ಹಾಜರಿದ್ದರು.