ಶೀಘ್ರವೇ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಿ ➤ ಸಚಿವ ಬೈರತಿ ಬಸವರಾಜ್ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 02. ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳು ವಿಳಂಬವಾಗುತ್ತಿದ್ದು ಶೀಘ್ರವಾಗಿ ಪೂರ್ಣಗೊಳಿಸಬೇಕು ವಿಳಂಬವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ಥು ಕ್ರಮ ಜರುಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜ (ಬೈರತಿ) ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 

ಅವರು ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬರುತ್ತಿರುವ ಕಾರಣ ಅಧಿಕಾರಿಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ಸರ್ಕಾರ ನೀಡುವ ಸಂಬಳಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಬೇಕು. ವಾರಕ್ಕೊಂದು ದಿವಸ ಒಂದೊಂದು ವಾರ್ಡ್‍ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಚಿವರು ಸೂಚಿಸಿದರು. ಹೊಸ ಬಸ್ ನಿಲ್ದಾಣಗಳ ವಿಭಜನೆಯ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ನಗರಗಳಲ್ಲಿ ಎಲ್.ಇ.ಡಿ ಲೈಟ್‍ಗಳನ್ನು ಅಳವಡಿಸುವಂತೆ ತಿಳಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾಗುತ್ತಿರುವ ಪೈಪ್ ಲೈನ್ ಕಾಮಗಾರಿಗಳನ್ನು ಅತೀ ಶೀಘ್ರವಾಗಿ ಮುಗಿಸಿ ಸಾರ್ವಜನಿಕರು ಓಡಾಡಲು ಸುಸಜ್ಜಿತವಾದ ಪಾದಚಾರಿಯನ್ನು ನಿರ್ಮಿಸಬೇಕು ಎಂದರು.

Also Read  ಇಂದು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

 


ಜನರಿಗೆ ದಿನ ನಿತ್ಯ ಕುಡಿಯುವ ನೀರು ಪೂರೈಸುವುದಕ್ಕಾಗಿ ಜಲಸಿರಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಬೃಹತ್ ಟ್ಯಾಂಕ್‍ಗಳ ನಿರ್ಮಾಣದ ಕೆಲಸವನ್ನು ವೇಗವಾಗಿ ಮುಗಿಸುವುದರೊಂದಿಗೆ ಪೌರ ಕಾರ್ಮಿಕರ ನಿವೇಶನಗಳ ಪರಿಶೀಲನೆ ಹಾಗೂ ಅವರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಪ್ರಗತಿಯಲ್ಲಿರುವ ಕೆರೆಗಳು, ಉದ್ಯಾನವನಗಳು, ಕೊಳಗೇರಿಯ ಅಭಿವೃದ್ಧಿ ಕಾಮಗಾರಿಗಳ ಖರ್ಚು, ವೆಚ್ಚಗಳನ್ನು ಪರಿಶೀಲನೆ ನಡೆಸಿ ನೂತನ ಬಜೆಟ್‍ನಲ್ಲಿ ಮಂಗಳೂರು ನಗರ ಅಭಿವೃದ್ಧಿಗೆ ಮತ್ತಷ್ಟು ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.


ಪ್ರಧಾನ ಮಂತ್ರಿಯವರ ಕನಸನ್ನು ನನಸಾಗಿಸಲು ಮಂಗಳೂರನ್ನು ಅತ್ಯಾಧುನಿಕ ನಗರವನ್ನಾಗಿಸಲು ನಾವೆಲ್ಲರು ಶ್ರಮಿಸಬೇಕಾಗಿದೆ ಮುಂದಿನ ತಿಂಗಳು ಮತ್ತೊಮ್ಮೆ ಜಿಲ್ಲೆಗೆ ಭೇಟಿ ನೀಡಲಿದ್ದೇನೆ ಎಂದರು. ಸಭೆಯಲ್ಲಿ ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಳಾ ರಾವ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಶಾಸಕರಾದ ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Also Read  ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ಮೊಬೈಲ್ ರೀಟೇಲರ್ಸ್‌ರಿಂದ ಪ್ರತಿಭಟನೆ 

error: Content is protected !!
Scroll to Top