(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳಿಗೆ ಚಿಕಿತ್ಸೆ ನೀಡುವುದರ ಬದಲು ತಮ್ಮ ಕಂಪ್ಯೂಟರ್ ನಲ್ಲಿ ಆಟವಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜ. 22ರಂದು ವಿಜಯ್ ಎಂಬವರು ಅಧಿಕ ರಕ್ತದೊತ್ತಡದಿಂದ ಬಿದ್ದು ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿನ ಸಿಬ್ಬಂದಿಗಳು ರೋಗಿಗೆ ಚಿಕಿತ್ಸೆ ನೀಡುವ ಬದಲು ತಮ್ಮ ಕಂಪ್ಯೂಟರ್ ನಲ್ಲಿ ಗೇಮ್ ಆಡುತ್ತಿದ್ದರು ಎನ್ನಲಾಗಿದೆ. ರೋಗಿಯ ಜೊತೆಗಿದ್ದ ಆಪ್ತರು ವೈದ್ಯರು ಹಾಗೂ ಸಿಬ್ಬಂದಿಯನ್ನು ಕರೆದು ಚಿಕಿತ್ಸೆ ನೀಡುವಂತೆ ಎಷ್ಟೇ ಕೇಳಿದರೂ ಸ್ಪಂದಿಸಲಿಲ್ಲ ಎನ್ನಲಾಗಿದೆ. ರೋಗಿಯನ್ನು ಬೇರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಸ್ಥಳಾಂತರಿಸಬೇಕೆಂದು ವೈದ್ಯರು ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕರ್ತವ್ಯಲೋಪ ಎಸಗಿರುವ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ದ ಸೂಕ್ತ ಕ್ರಮಕ್ಕೆ ರೋಗಿಯ ಕುಟುಂಬಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.