(ನ್ಯೂಸ್ ಕಡಬ) newskadaba.com ಕಡಬ, ಜ. 26. ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯು ಹಮ್ಮಿಕೊಂಡ 73 ನೇ ಗಣರಾಜ್ಯೋತ್ಸವ ದಿನಾಚರಣೆಯು ಸಂಸ್ಥೆಯ ಆವರಣದಲ್ಲಿ ವಿದ್ಯುಕ್ತವಾಗಿ ನೆರವೇರಿತು.
ಕಡಬ ತಾಲೂಕು ನಿವೃತ್ತ ಯೋಧರ ಸಂಘದ ಅಧ್ಯಕ್ಷರಾದ ಶ್ರೀ ಜೆ.ಪಿ.ಎಂ. ಚೆರಿಯನ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ಗಣತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕೂಡ ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟ ಹಕ್ಕುಗಳನ್ನು ಸಕಾರಾತ್ಮಕವಾಗಿ ಹೊಂದುವುದು ಮಾತ್ರವಲ್ಲದೆ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಿ ,ಎಲ್ಲರೂ ಆದರ್ಶ ಭಾರತೀಯ ಪ್ರಜೆಗಳಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಆನ್ಸ್ ಪ್ರೌಢಶಾಲಾ ಪ್ರಾಂಶುಪಾಲರಾದ ವಂ||ಅಮಿತ್ ಪ್ರಕಾಶ್ ರೋಡ್ರಿಗಸ್ ರವರು ಮಾತನಾಡಿ, ನಮ್ಮ ಆಡಳಿತ ವ್ಯವಸ್ಥೆ ರೂಪಿಸುವ ನಿಯಮಗಳನ್ನು ಕ್ರಮಬದ್ಧವಾಗಿ ಅನುಸರಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಈ ದಿಸೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾವೆಲ್ಲ ಎತ್ತಿ ಹಿಡಿಯಬೇಕಾಗಿದೆ; ವಿದ್ಯಾರ್ಥಿ ದೆಸೆಯಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸೈಂಟ್ ಜೋಕಿಮ್ಸ್ ಕಾಲೇಜು ಪ್ರಾಚಾರ್ಯರಾದ ಶ್ರೀ ಕಿರಣ್ ಕುಮಾರ್, ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶ್ರೀಲತಾ, ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿ. ಹಿಲ್ಡಾ ರೋಡ್ರಿಗಸ್, ಸೈಂಟ್ ಆನ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ದಕ್ಷಾ ಹಾಗೂ ಕಡಬ ತಾಲೂಕು ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ಮಾಜಿ ಯೋಧರು ವಿಶೇಷವಾಗಿ ಪಾಲ್ಗೊಂಡಿದ್ದರು.
ಸೆಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ಶಿಕ್ಷಕಿ ಚೈತ್ರಾ ಸ್ವಾಗತಿಸಿ, ಸೈಂಟ್ ಜೋಕಿಮ್ಸ್ ಕಾಲೇಜು ವಿದ್ಯಾರ್ಥಿನಿ ಪಲ್ಲವಿ ಬಿ.ಡಿ ವಂದಿಸಿದರು. ಸೈಂಟ್ ಜೋಕಿಮ್ಸ್ ಪ್ರೌಢ ಶಾಲಾ ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.