(ನ್ಯೂಸ್ ಕಡಬ) newskadaba.com ಕಡಬ, ಜ. 25. ಮರ್ದಾಳ ಗ್ರಾಮ ಪಂಚಾಯತ್ ನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ಹರೀಶ್ ಕೊಡಂದೂರುರವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಗ್ರಾಮಸಭೆಗೆ ಹೆಚ್ಚಿನ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಹಾಗೂ ಗ್ರಾಮಸ್ಥರು ಕೂಡಾ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಗ್ರಾಮಸಭೆ ನಡೆಸುವುದು ಬೇಕೆ ಬೇಡವೇ ಎಂಬ ಚರ್ಚೆಯೂ ನಡೆಯಿತು.
ಗ್ರಾಮ ಸಭೆಗೆ ಕೇವಲ ಮೂರ್ನಾಲ್ಕು ಇಲಾಖಾಧಿಕಾರಿಗಳು ಆಗಮಿಸಿದ್ದು, ಗ್ರಾಮಸ್ಥರು ಕೂಡಾ ಕಡಿಮೆ ಸಂಖ್ಯೆಯಲ್ಲಿ ಸೇರಿದ್ದರು. ಈ ಕುರಿತು ಗ್ರಾಮಸ್ಥರಾದ ವಿಜಯಕುಮಾರ್ ರೈ ಕರ್ಮಾಯಿ, ಗಣೇಶ್ ಕೈಕುರೆ, ಗಣೇಶ್ ಮೊದಲಾದವರು ಮಾತನಾಡಿ, ಕಾಟಾಚಾರಕ್ಕೆ ಗ್ರಾಮ ಸಭೆ ಮಾಡಬೇಡಿ. ನೀವು ಸರಿಯಾದ ಪ್ರಚಾರ ಮಾಡಿಲ್ಲ, ಆದುದರಿಂದ ಗ್ರಾಮಸ್ಥರು ಆಗಮಿಸಲಿಲ್ಲ ಎಂದು ಆರೋಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಹಾಗೂ ಅಧ್ಯಕ್ಷರು ನಾವು ಮೈಕ್ ಮೂಲಕವೇ ಪ್ರಚಾರ ಮಾಡಿದ್ದೇವೆ ಎಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆದ ನಂತರ ಗ್ರಾಮಸಭೆ ಆರಂಭಗೊಂಡಿದೆ. ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಭಾಗವಹಿಸಿದ್ದರು.