ತಿಂಗಳ ಅಂತ್ಯದಲ್ಲಿ ಕೋವಿಡ್ ಮೊದಲ ಡೋಸ್ ಪೂರ್ಣಗೊಳಿಸಲು ಸಿಎಂ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇದುವರೆಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯದೇ ಬಾಕಿ ಉಳಿದಿರುವ ಪ್ರದೇಶಗಳಲ್ಲಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಂಡು ಈ ತಿಂಗಳ ಅಂತ್ಯದೊಳಗೆ ಕೋವಿಡ್ ವ್ಯಾಕ್ಸಿನ್‍ನ ಮೊದಲ ಡೋಸ್ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಮಂಗಳವಾರದಂದು ನಡೆದ ವರ್ಚುವಲ್ ಮಾಧ್ಯಮದ ಮೂಲಕ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಕೋವಿಡ್-19 ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು.

ಕೋವಿಡ್ ವ್ಯಾಕ್ಸಿನ್‍ನ ಮೊದಲ ಡೋಸ್ ನೀಡಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇದುವರೆಗೆ ಶೇ.96ರಷ್ಟು ಪ್ರಗತಿ ಸಾಧಿಸಿದೆ. ಬಾಕಿ ಉಳಿದ ವ್ಯಾಕ್ಸಿನ್ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಕೋವಿಡ್ ಲಸಿಕೆ ನೀಡುವುದು ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಅದು ಸಂಪೂರ್ಣವಾಗಲೇಬೇಕು. ಅದರ ಶೇ.100ರಷ್ಟು ಪ್ರಗತಿಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲೇಬೇಕು, ಪ್ರಮುಖವಾಗಿ ಉಳ್ಳಾಲ, ಕೋಟೆಕಾರು, ಸೋಮೇಶ್ವರ, ಸೇರಿದಂತೆ ಮೊದಲ ಡೋಸ್ ಬಾಕಿ ಉಳಿದ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಮುಖಂಡರು, ಸಮುದಾಯಗಳ ಮುಖ್ಯಸ್ಥರು ಮತ್ತು ಶಾಸಕರ ಸಹಕಾರದೊಂದಿಗೆ ಮೊದಲ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಬೇಕು, ಅದಕ್ಕಾಗಿ ವಿಶೇಷ ಅಭಿಯಾನಗಳನ್ನು, ಸೃಜನಾತ್ಮಕ ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

Also Read  ಮೀನು‌ ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ..!

ಇತರೆ ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಿಕೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗುತ್ತಿದೆ. ಆದರೆ ಸುಶಿಕ್ಷಿತ ಜಿಲ್ಲೆಯೆಂಬ ಹೆಗ್ಗಳಿಕೆ ಪಡೆದಿರುವ ದಕ್ಷಿಣ ಕನ್ನಡದಲ್ಲಿ ಇದೂವರೆಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಕೂಡ ಪೂರ್ಣವಾಗದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಮೊದಲ ಡೋಸ್‍ನ ಶೇ.100ರಷ್ಟು ಪ್ರಗತಿಗೆ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಆದ್ಯತೆಯ ಮೇರೆಗೆ ನಿರ್ವಹಿಸುವಂತೆ ನಿರ್ದೇಶನ ನೀಡಿದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊದಲ ಡೋಸ್ ಪಡೆಯದವರನ್ನು ಪತ್ತೆ ಮಾಡಬೇಕು. ಅವರ ಮನೆಗಳಿಗೆ ಭೇಟಿ ನೀಡಬೇಕು. ಆದಷ್ಟು ಶೀಘ್ರವಾಗಿ ಕೋವಿಡ್‍ನ ಮೊದಲ ಡೋಸ್ ಪೂರ್ಣಗೊಳಿಸಬೇಕು, ಲಸಿಕೆ ಪಡೆಯದವರಲ್ಲಿ ಅದರ ಮಹತ್ವವನ್ನು ತಿಳಿಸಿಕೊಡಬೇಕು ಎಂದು ತಿಳಿಸಿದರು. ಶೇ.100% ರಷ್ಟು ಲಸಿಕೆ ನೀಡುವುದು ಸವಾಲಾಗಿದೆ ಆದರೆ ಶ್ರಮವಹಿಸಿ ಆ ಸವಾಲನ್ನು ಜಯಿಸಬೇಕು, ಅದನ್ನು ಪ್ರಯತ್ನಗಳ ಮೂಲಕ ಸಾಕಾರ ಮಾಡಬೇಕು ಎಂದು ಸಲಹೆ ನೀಡಿದರು.

ಅದೇ ರೀತಿ ಜಿಲ್ಲೆಯಲ್ಲಿ ಎರಡನೇ ಡೋಸ್ ಶೇ.81 ರಷ್ಟಾಗಿದ್ದು, ಅದರ ಪ್ರಗತಿಯೆಡೆಗೂ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಕೆ.ವಿ. ಅವರು ಕೋವಿಡ್ ಲಸಿಕೆ ಮೊದಲ ಡೋಸ್ ಬಾಕಿ ಉಳಿದಿರುವ ಉಳ್ಳಾಲ, ಕೋಟೆಕಾರು ಹಾಗೂ ಸೋಮೇಶ್ವರ ಸೇರಿದಂತೆ ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಅಲ್ಲಿನ ಶಾಸಕರು, ಜನ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯರ ಸಹಯೋಗದಲ್ಲಿ ಶೇ100% ರಷ್ಟು ಪ್ರಗತಿ ಸಾಧಿಸಲಾಗುವುದು ಎಂದು ತಿಳಿಸಿದರು. ಆರೋಗ್ಯ ಸಚಿವರಾದ ಡಾ. ಸುಧಾಕರ್ ಅವರು ಮಾತನಾಡಿ, ಮೊದಲ ಡೋಸ್ ಪಡೆದು, ಎರಡನೇ ಡೋಸ್ ಪಡೆಯದವರ ವಿಳಾಸ ಮತ್ತು ಮೊಬೈಲ್ ನಂಬರ್ ಲಭ್ಯವಿದ್ದು, ಅವರನ್ನು ಸಂಪರ್ಕಿಸಿ ಎರಡನೇ ಡೋಸ್ ಪಡೆಯಲು ಅರಿವು ಮೂಡಿಸುವಂತೆ ತಿಳಿಸಿದರು. ನಂತರ ಜಿಲ್ಲಾಧಿಕಾರಿಯವರು ಜಿಲ್ಲೆಯ ಕೋವಿಡ್ ಸ್ಥಿತಿ-ಗತಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಚುಯಲ್ ಮಾಧ್ಯಮದ ಮೂಲಕ ಸಂಪರ್ಕದಲ್ಲಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Also Read  ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ - ಸಿರಿಬಾಗಿಲು ಮಧ್ಯೆ ಭೂಕುಸಿತ ► ಮಂಗಳೂರು - ಬೆಂಗಳೂರು ರೈಲು ಸಂಚಾರ ಸ್ಥಗಿತ

 

 

error: Content is protected !!
Scroll to Top