ಮಂಗಳೂರು: ಆರೋಗ್ಯ ಅಧಿಕಾರಿ ಹುದ್ದೆಗೆ ತುಳು ಭಾಷಿಗರಿಗೆ ಪ್ರಾಶಸ್ತ್ಯ ನೀಡುವಂತೆ ಆಗ್ರಹ ➤ ಜಿಲ್ಲಾ ಆರೋಗ್ಯ ಅಧಿಕಾರಿಗೆ ತು.ರ.ವೇ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗೆ ತುಳು ಭಾಷಿಗರಿಗೆ ಪ್ರಾಶಸ್ತ್ಯ ನೀಡುವಂತೆ ಆಗ್ರಹಿಸಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ ನೀಡಿ ಒತ್ತಾಯಿಸಿದೆ.

ದಕ್ಷಿಣ ಜಿಲ್ಲೆ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಇಲ್ಲಿನ ನುರಿತ ವೈದ್ಯರು ಹಾಗೂ ವಿಶ್ವ ದರ್ಜೆಯ ಆಸ್ಪತ್ರೆಗಳು ನೀಡುತ್ತಿರುವ ಸೇವೆ ಶ್ಲಾಘನೀಯ. ಕಳೆದ 2 ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಜನರು ಸಂಕಷ್ಟಗೀಡಾದಾಗ ಜಿಲ್ಲೆಯಲ್ಲಿ ಕೊರೊನಾ ಯೋಧರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ದಕ್ಷಿಣ ಕನ್ನಡ ಜಿಲ್ಲೆಗೆ ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆ ಹೊಸದು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವರು ನೀಡುವ ಸೇವೆಯಿಂದ ಬಡಜನರಿಗೆ ಅನುಕೂಲಕರವಾಗಿದೆ. ಈ ಹುದ್ದೆಗೆ ಹೊರಜಿಲ್ಲೆ ಅಭ್ಯರ್ಥಿಗಳು ಕೂಡ ಸ್ಪರ್ದೆಯಲ್ಲಿದ್ದಾರೆ. ಹೊರ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಊರಿನ ಅಭ್ಯರ್ಥಿಗಳಿಗೆ ಪ್ರಾಶಸ್ತ ನೀಡುತ್ತಾರೆ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಬುದ್ದಿವಂತರ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ತುಳುನಾಡಿನ ಯುವಕ/ಯುವತಿಯರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಹಾಗೂ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರು ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳಾದ ಡಾ.ಕಿಶೋರ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಬಂಟ್ವಾಳ ತು.ರ.ವೇ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಜಲೋಡಿ, ಮುಖಂಡರಾದ ಆನಂದ್ ಅಮೀನ್ ಅಡ್ಯಾರ್, ಹರೀಶ್ ಶೆಟ್ಟಿ ಶಕ್ತಿನಗರ, ಮುನೀರ್ ಮುಕ್ಕಚೇರಿ, ಅಬ್ದುಲ್ ಅಝೀಜ್ ಉಳ್ಳಾಲ, ಪ್ರಶಾಂತ್ ಭಟ್ ಕಡಬ ಮೊದಲಾದವರು ಉಪಸ್ಥಿತರಿದ್ದರು.

Also Read  ➤ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ 8 ಕನ್ನಡಿಗರಿಗೆ ಪದ್ಮ ಪ್ರಶಸ್ತಿ

 

error: Content is protected !!
Scroll to Top