ಕೊಂಬಾರು ಗ್ರಾಮಸ್ಥರಿಗೆ ಕೊನೆಗೂ ಬಂತು ನೆಟ್ವರ್ಕ್ ಭಾಗ್ಯ ➤ ಕೊಂಬಾರು ಹಾಗೂ ಸಿರಿಬಾಗಿಲಿನಲ್ಲಿ ಜಿಯೋ ಟವರ್ ಗೆ ಸಾಂಕೇತಿಕ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಜ.11. ಕಡಬ ತಾಲೂಕಿನ ಕುಗ್ರಾಮವಾಗಿದ್ದ ಕೊಂಬಾರಿನಲ್ಲಿ ಕೊನೆಗೂ ಜಿಯೋ ಕಂಪೆನಿಯ ಮೊಬೈಲ್ ಟವರ್ ಸೋಮವಾರದಿಂದ ಸಾಂಕೇತಿಕವಾಗಿ ಆರಂಭಗೊಂಡಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿದ್ದ ಕೊಂಬಾರು ಗ್ರಾಮದ ಜನತೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ತಾಲೂಕಿನಲ್ಲೇ ಹಿಂದುಳಿದ ಗ್ರಾಮವಾಗಿದ್ದ ಕೊಂಬಾರು ಗ್ರಾಮ ಪಂಚಾಯತ್ ನ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮದ ಜನತೆ ನೆಟ್ವರ್ಕ್ ಸಿಗಬೇಕೆಂದರೆ ಕಿಲೋಮೀಟರ್ ದೂರ ನಡೆದು ನೆಟ್ವರ್ಕ್ ಹುಡುಕುವ ಪ್ರಮೇಯ ಎದುರಾಗಿತ್ತು. ಲಾಕ್ ಡೌನ್ ವೇಳೆ ಆನ್‌ಲೈನ್ ತರಗತಿಗಾಗಿ ನೆಟ್ವರ್ಕ್ ಸಿಗದೆ ವಿದ್ಯಾರ್ಥಿಗಳು ಪರದಾಡಿದ್ದರು‌. ಈ ಹಿಂದೆ ಕೊಂಬಾರು ಶಾಲೆಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಟವರ್ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು. ಇದರ ಜೊತೆಗೆ ಸ್ಥಳೀಯ ಯುವಕರು ‘ವ್ಯಾಪ್ತಿ ಪ್ರದೇಶದ ಹೊರಗೆ’ ಎಂಬ ವಾಟ್ಸ್ಅಪ್ ಗ್ರೂಪ್ ರಚಿಸಿಕೊಂಡು ಟವರ್ ನಿರ್ಮಾಣಕ್ಕಾಗಿ ಹೋರಾಟ ನಡೆಸಿ ಒತ್ತಡ ಹೇರಿದ್ದರ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರರು ಜಿಯೋ ಕಂಪೆನಿಯ ಅಧಿಕಾರಿಗಳನ್ನು ಕಳುಹಿಸಿ ಟವರ್ ನಿರ್ಮಿಸಲು ಸೂಚಿಸಿದ್ದರು. ಅದರಂತೆ ಕೊಂಬಾರು ಗ್ರಾಮದ ಕೋಲ್ಕಜೆ ಹಾಗೂ ಸಿರಿಬಾಗಿಲು ಜನವಸತಿ ಪ್ರದೇಶದಲ್ಲಿ ಒಟ್ಟು ಎರಡು ಜಿಯೋ ಕಂಪೆನಿಯ ಟವರನ್ನು ನಿರ್ಮಿಸಲಾಗಿದ್ದು, ಸೋಮವಾರದಿಂದ ಜಿಯೋ ಸಂಸ್ಥೆಯವರು ಸಾಂಕೇತಿಕವಾಗಿ ಚಾಲನೆ ನೀಡಿದು, ಅಧಿಕೃತ ಚಾಲನೆ ನೀಡಲು ಮಾತ್ರ ಬಾಕಿ ಉಳಿದಿದೆ.

Also Read  ಉಪ್ಪಿನಂಗಡಿ: ದರೋಡೆ ಪ್ರಕರಣದ ಆರೋಪಿ ಪೊಲೀಸ್ ಬಲೆಗೆ

 

 

error: Content is protected !!
Scroll to Top