(ನ್ಯೂಸ್ ಕಡಬ) newskadaba.com ಕಡಬ, ಜ.11. ಕಡಬ ಪಟ್ಟಣ ಪಂಚಾಯಿತಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸದೆ ಮನಬಂದಂತೆ ತೆರಿಗೆ ಸೇರಿದಂತೆ ಇನ್ನಿತರ ವ್ಯವಸ್ಥೆಯನ್ನು ಏರಿಕೆ ಮಾಡಿ ಜನತೆಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿ ಕಡಬ ನಾಗರೀಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯು ಇಂದು (ಜ.11) ನಡೆಯಲಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.
ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಂಗಳವಾರ ಪೂರ್ವಾಹ್ನ ಕಡಬ ಮೇಲಿನ ಪೇಟೆಯಿಂದ ಮೆರವಣಿಗೆಯಲ್ಲಿ ತೆರಳಿ ಪಟ್ಟಣ ಪಂ. ಕಛೇರಿ ಎದುರು ಪ್ರತಿಭಟನೆ, ಸರಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಮನೆ ತೆರಿಗೆಯನ್ನು ಕಾನೂನು ರೀತಿಯಲ್ಲಿ ಏರಿಸದೇ ಮನಃ ಬಂದಂತೆ ಏರಿಸಿ ವಸೂಲಿ ಮಾಡುವುದು, 9/11 ಮಾಡಿರುವುದನ್ನು ಈಗ ಪುನರ್‌ರೂಪಿ (ನಮೂನೆ-೩) ರಲ್ಲಿ ಮಾರ್ಪಡಿಸಿ ಹೆಚ್ಚಿನ ಮೊಬಲಗನ್ನು ವಸೂಲಿ ಮಾಡುವುದು. ಅಂಗಡಿ, ವ್ಯಾಪಾರ ಲೈಸನ್ಸ್ ನವೀಕರಣ ಮಾಡಲು ಹೆಚ್ಚಿನ ದರ ವಿಧಿಸುವುದು. ಸ್ವಂತ ಮನೆ, ಅಂಗಡಿ, ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧವಾಗಿ ಇರುವ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರವನ್ನು ವಸೂಲಿ ಮಾಡುವುದು. ಕುಡಿಯುವ ನೀರಿನ ಸೌಲಭ್ಯಕ್ಕೆ 30 ವರ್ಷಗಳ ಹಿಂದಿನ ಪೈಪ್‌ಲೈನ್, ಬೋರ್‌ವೆಲ್‌ಗಳನ್ನು ದುರಸ್ಥಿ ಮಾಡದೇ ಇರುವುದು, ವಿದ್ಯುತ್ ದೀಪ ಇದ್ದರೂ ಇಲ್ಲದಂತಿರುವುದು, ಯಾವುದೇ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ವಿದ್ಯುತ್ ದೀಪ ವಿಸ್ತರಿಸದೇ ಇರುವುದು.
ಕೋಡಿಂಬಾಳ ಗ್ರಾಮದ ಗುರಿಯಡ್ಕ, ಎಳಿಯೂರು, ದೊಡ್ಡಕೊಪ್ಪ, ಅಡ್ಡಗದ್ದೆ, ಪಾಲೋಳಿ, ಪಿಜಕ್ಕಳ, ಕಳಾರ, ಪಣೆಮಜಲು ಕಡಬದಿಂದ ದೂರವಿರುವ ಹಳ್ಳಿಗೂ ಅಲ್ಲಿಯ ಭೂಮಿಯನ್ನು ಮಾರಾಟ ಮಾಡುವ ಸಂದರ್ಭ ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ಒಂದೇ ದರ ನಿಗದಿ ಪಡಿಸಿರುತ್ತಾರೆ. ಪಟ್ಟಣ ಪಂ. ಗಡಿ ಗುರುತು ಮಾಡದೇ ಇರುವುದರಿಂದ ಈ ಸಮಸ್ಯೆ ಉಂಟಾಗಿರುತ್ತದೆ. ಕಾನೂನಿನಲ್ಲಿ ಅವಕಾಶವಿದ್ದರೂ ಪಟ್ಟಣ ಪಂ. ಗಮನ ಹರಿಸದೇ ಇರುವುದು. ಕಡಬ ಪೇಟೆಯಲ್ಲಿ ರಿಕ್ಷಾ, ಕಾರು, ಪಿಕಪ್-ಗೂಡ್ಸ್ ಬಸ್ಸುಗಳಿಗೆ ನಿಲುಗಡೆ ವ್ಯವಸ್ಥೆಯಿಲ್ಲದೆ ಇರುವುದು, ಉದ್ಯೋಗ ಖಾತರಿ ಯೋನೆಯಲ್ಲಿ ಲಕ್ಷಾಂತರ ಮಂದಿಗೆ ಬೇರೆ ಬೇರೆ ಯೋಜನೆಯಲ್ಲಿ ಸಹಾಯ ಸಹಕಾರ ಇದ್ದರೂ ಕೂಡಾ ಕಡಬ ಪಟ್ಟಣ ಪಂ. ವ್ಯಾಪ್ತಿಯ ಈ ಸವಲತ್ತು ದೊರಕದೆ ವಂಚಿತರಾಗಿರುವುದು. ಕಡಬ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಇದ್ದರೂ, ಕೂಡಾ ಶುಚಿತ್ವ ನೀರಿನ ಕೊರತೆಯಿಂದ ಕೊಳೆತು ನಾರುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದ್ದರೂ ಕೂಡಾ ಈ ತನಕ ದುರಸ್ತಿಗೊಳಿಸದೇ ಇರುವುದು ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟದ ಸಿದ್ಧತೆ ನಡೆಸಲಾಗಿದೆ ಎಂದು ಮೀರಾ ಸಾಹೇಬ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಉದ್ಯಮಿ ತೋಮ್ಸನ್ ಕೆ.ಟಿ, ಚಂದ್ರಶೇಖರ ಗೌಡ ಕೋಡಿಬೈಲ್ , ಕೆ.ಎಂ.ಹನೀಫ್, ಶಿವರಾಮ್ ಗೌಡ ಕಲ್ಕಲ, ಚಂದ್ರಶೇಖರ ಪೆಲತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.