ಮಂಗಳೂರು: ಸೆಣಬು ಉತ್ಪನ್ನಗಳ ತಯಾರಿಕೆ ತರಬೇತಿ ಹಾಗೂ ಮಾರಾಟ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಚಿಂತನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ನಗರದ ಹೊರ ವಲಯದ ಪಿಲಿಕುಳ ಕರಕುಶಲ ಗ್ರಾಮದಲ್ಲಿ ಸೆಣಬು ಉತ್ಪನ್ನ ತಯಾರಿಕೆ ಕುರಿತ ತರಬೇತಿ ಹಾಗೂ ಮಾರಾಟ ಕೇಂದ್ರವೊಂದನ್ನು ತೆರೆಯುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

ಅವರು ಬುಧವಾರ ನಗರದ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಕೇಂದ್ರ ಟೆಕ್ಸ್ ಟೈಲ್ ಸಚಿವಾಲಯದ ವತಿಯಿಂದ ಸೆಣಬು ಬೋರ್ಡ್ ಆಯೋಜಿಸಿದ ಸೆಣಬು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು. ಸೆಣಬು ಪ್ಲಾಸ್ಟಿಕ್‍ಗೆ ಪರ್ಯಾಯವಾಗಿದೆ, ಪ್ಲಾಸ್ಟಿಕ್ ಬದಲು ಸೆಣಬು ಉತ್ಪನ್ನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಖರೀದಿಸಿ ಉತ್ತೇಜಿಸಬೇಕು. ಈ ಹಿನ್ನೆಲೆ ಪಿಲಿಕುಳ ಕರಕುಶಲ ಗ್ರಾಮದಲ್ಲಿ ಸೆಣಬು ಉತ್ಪನ್ನ ತಯಾರಿಕೆ, ಪ್ರದರ್ಶನ ಹಾಗೂ ಮಾರಾಟ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಅಲ್ಲದೇ ಈ ಬಗ್ಗೆ ಸೆಣಬು ಬೋರ್ಡ್, ರಾಷ್ಟ್ರೀಯ ಸೆಣಬು ಅಭಿವೃದ್ಧಿ ಕಾರ್ಯಕ್ರಮ, ನಬಾರ್ಡ್, ಪಿಲಿಕುಳ ನಿಸರ್ಗಧಾಮ ನಿಗಮ ಹಾಗೂ ಇತರೆ ಇಲಾಖೆಗಳ ಸಹಭಾಗಿತ್ವದಲ್ಲಿ ಪಿಲಿಕುಳದಲ್ಲೇ ಸೆಣಬು ಉತ್ಪನ್ನ ಸಿದ್ಧಪಡಿಸಲು ಕುಟುಂಬವೊಂದಕ್ಕೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಸೆಣಬು ಬೋರ್ಡ್ ನಿರ್ದೇಶಕ ಟಿ.ಅಯ್ಯಪ್ಪನ್ ಮಾತನಾಡಿ, ಇಲ್ಲಿ ಜ.10ರ ವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆ ವರೆಗೆ ಸೆಣಬು ಮೇಳ ಪ್ರದರ್ಶನ, ಮಾರಾಟ ಇರುತ್ತದೆ. ಒಟ್ಟು 21 ಸ್ಟಾಲ್‍ಗಳು ಇದ್ದು, ಇದರಲ್ಲಿ ಮೂರು ಸ್ಟಾಲ್‍ಗಳು ಕರ್ನಾಟಕದ್ದಾಗಿರುತ್ತದೆ. ಉಳಿದ ಸ್ಟಾಲ್‍ಗಳು ತಮಿಳುನಾಡು, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳದ್ದು ಆಗಿರುತ್ತದೆ. ಕವರಿಂಗ್ಸ್, ಹ್ಯಾಂಡ್, ಶಾಪಿಂಗ್ ಬ್ಯಾಗ್ಸ್, ಗಿಫ್ಟ್ ಐಟಂಗಳು, ಡೆಕೊರೇಟಿವ್ ಫ್ಯಾಬ್ರಿಕ್ಸ್ ಸೇರಿದಂತೆ ವಿವಿಧ ಬಗೆಯ ಗೃಹೋಪಯೋಗಿ ಸೆಣಬು ಉತ್ಪನ್ನಗಳು ಲಭ್ಯವಿರುತ್ತದೆ. ಗ್ರಾಹಕರು ಪರಿಸರ ಸ್ನೇಹಿ ಸೆಣಬು ಉತ್ಪನ್ನವನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ವಿನಂತಿಸಿದರು. ನಬಾರ್ಡ್ ಅಧಿಕಾರಿ ಸಂಗೀತಾ, ತೋಟಗಾರಿಕಾ ಇಲಾಖೆ ಇಲಾಖೆಯ ಉಪನಿರ್ದೇಶಕ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Also Read  ಉಡುಪಿ ಪೊಲೀಸರ ಕಾರ್ಯಾಚರಣೆ ➤ 14.70 ಲಕ್ಷ ಮೌಲ್ಯದ ವಿದೇಶಿ ಹೈಡ್ರೊವಿಡ್ ಗಾಂಜಾ ವಶ

 

 

error: Content is protected !!
Scroll to Top