ಸುಬ್ರಹ್ಮಣ್ಯ: ಮೆಸ್ಕಾಂನ ವಿವಿಧ ಕಾಮಗಾರಿಗಳ ಉದ್ಘಾಟನೆ ➤ ರೈತ, ಗ್ರಾಹಕ, ಉದ್ಯಮ ಪೂರಕ ಸೌಲಭ್ಯಕ್ಕೆ ಯೋಜನೆ- ಸುನಿಲ್ ಕುಮಾರ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 05. ರೈತರಿಗೆ, ಗ್ರಾಹಕರಿಗೆ, ಉದ್ಯಮಗಳಿಗೆ, ಕಾರ್ಖಾನೆಗಳಿಗೆ ಇಂಧನ ಇಲಾಖೆಯಿಂದ ಉತ್ತಮ ರೀತಿಯ ಸೌಲಭ್ಯ ಸಹಕಾರ ನೀಡುವಂತಹ ಮೂರು ಆಯಾಮಗಳಲ್ಲಿ ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅರಣ್ಯ ಪ್ರದೇಶಗಳಿರುವಲ್ಲಿ ಇಂಧನ ಇಲಾಖೆಯ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ರಾಜ್ಯ, ಕೇಂದ್ರ ಸರಕಾರದ ಪ್ರಯತ್ನದಿಂದ ಅರಣ್ಯ ಇಲಾಖೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಅಭಿವೃದ್ಧಿ ಕೆಲಸ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ತೊಂದರೆ ಮಾಡಬಾರದು ಎಂಬ ಆಕಾಂಕ್ಷೆ ಇಟ್ಟುಕೊಂಡು ಇಲಾಖೆ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಿದೆ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.


ಸುಬ್ರಹ್ಮಣ್ಯದಲ್ಲಿ ಭೂಗತ ಕೇಬಲ್ ಮತ್ತು 8 ಮೆಗಾ ವೋಲ್ಟ್ ಪರಿವರ್ತಕ, 11 ಕೆ.ವಿ. ಫೀಡರ್ ನ್ನು ಸುಬ್ರಹ್ಮಣ್ಯ ಸಬ್‍ಸ್ಟೇಷನ್‍ನಲ್ಲಿ ಸೋಮವಾರದಂದು ಲೋಕಾರ್ಪಣೆ ಗೊಳಿಸಿ, ಬಳಿಕ ಇಲ್ಲಿನ ವಲ್ಲೀಶಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಗುತ್ತಿಗಾರಿನಿಂದ ಸುಬ್ರಹ್ಮಣ್ಯಕ್ಕೆ 11 ಕಿ.ಮೀ. ಭೂಗತ ಮಾರ್ಗ ಕಾಮಗಾರಿ ಜೆಲ್ಲೆಯ ಮೊದಲ ಕಾಮಗಾರಿ ಆಗಿದೆ. ಬೆಳಕು ಯೋಜನೆ ಮೂಲಕ ದ.ಕ.ಜಿಲ್ಲೆಯಲ್ಲಿ ಎರಡೂವರೆ ಸಾವಿರ ವಿದ್ಯುತ್ ರಹಿತರ ಪಟ್ಟಿಯನ್ನು ಮಾಡಲಾಗಿದ್ದು, 1700 ಜನರಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ಇಪ್ಪತ್ತು ಸಾವಿರ ಟಿಸಿಗಳನ್ನು ಹಾಳಾದ 24 ಗಂಟೆಗಳಲ್ಲಿ ಬದಲಾಯಿಸಲಾಗಿದೆ. ಕೇಂದ್ರ ಸರಕಾರದ ಆರ್‌ಡಿ ಎಸ್ ಯೋಜನೆ ಮೂಲಕ ಮೆಸ್ಕಾಂನಲ್ಲಿ 1100 ಕೋಟಿ ರೂ. ಅನುದಾನ ಬರಲಿದ್ದು, 290 ಕೋಟಿ ರೂ. ಮಂಗಳೂರಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದ ಅವರು ಜನರ, ಸರಕಾರದ ಉತ್ತಮ ರೀತಿಯ ಸಹಭಾಗಿತ್ವದಿಂದ ಮೆಸ್ಕಾಂ ಇಂದು ಲಾಭದಾಯಕವಾಗಿದೆ. ಇಂಧನ ಇಲಾಖೆಯಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕೆಲಸಗಳು ನಡೆಯುತ್ತಾ ಬದಲಾವಣೆಗಳು ಆಗುತ್ತಿವೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

Also Read  ರಾಜ್ಯ ಮಟ್ಟದ ಕರಾಟೆ ➤ ಜ್ಞಾನೋದಯ ಬೆಥನಿ ವಿದ್ಯಾರ್ಥಿನಿ ರಕ್ಷಾ ಇವರಿಗೆ ಕಾಪಾದಲ್ಲಿ ಚಿನ್ನದ ಪದಕ

 

ಕುಕ್ಕೆಗೆ ಯೋಜನೆ;
ಸುಬ್ರಹ್ಮಣ್ಯಕ್ಕೆ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆ ಕಲ್ಪಿಸಲು ಶಾಸಕರು, ದೇವಳದ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ. ಸುಬ್ರಹ್ಮಣ್ಯಕ್ಕೆ ಅಂಡರ್ ಗ್ರೌಂಡ್ ವ್ಯವಸ್ಥೆಗೆ ನೀಲಿ ನಕಾಶೆ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಶೀಘ್ರ ಯುಜಿ ಕೇಬಲ್ ಅಳವಡಿಸಲು ಸಿದ್ಧರಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಭರವಸೆ ನಿಡಿದರು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್‍ಡಿಎ ಸರಕಾರ ಈವರೆಗಿನ 13 ವರ್ಷಗಳಲ್ಲಿ ಈ ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಹಸದ ಕೆಲಸಗಳನ್ನು ಮಾಡಿದೆ. ಅಭಿವೃದ್ಧಿ ಸಂಬಂಧಿಸಿದಂತೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಭಿವೃದ್ಧಿ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ರಸ್ತೆ ಸೇರಿದಂತೆ ಎಲ್ಲಾ ವಿಧದ ಅಭಿವೃದ್ಧಿ ನಡೆಸಲಾಗಿದೆ ಎಂದ ಅವರು ಅಧಿಕಾರವಿದ್ದ ಸಂದರ್ಭದಲ್ಲಿ ಅಭಿವೃದ್ಧಿ ನಡೆಸದವರು ಇಂದು ವಿರೋಧ ಮಾಡುತ್ತಿದ್ದಾರೆ ಎಂದು ದೂರಿದರು. ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಮಠದೀಶರಾದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ದಿ.ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್‍ನ ಸಂತೋಷ್ ರೈ ಬೋಲಿಯಾರ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‍ರಾಂ ಸುಳ್ಳಿ, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಜಿ., ಉಪಾಧ್ಯಕ್ಷೆ ಸವಿತಾ ಭಟ್, ಮೆಸ್ಕಾಂ ನಿರ್ದೇಶಕ ಕಿಶೋರ್ ಬಿ.ಆರ್., ಮುಖ್ಯ ಆರ್ಥಿಕ ಅಧಿಕಾರಿ ಗಂಗಾಧರ್ ಬಿ.ವಿ., ಮುಖ್ಯ ಇಂಜಿನಿಯರ್ ಮಂಜಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಸ್ವಾಗತಿಸಿದರು. ನಿರ್ದೇಶಕಿ ಡಿ.ಪದ್ಮಾವತಿ ವಂದಿಸಿದರು. ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.

Also Read  ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ಡಿ.ವಿ.ಸದಾನಂದ ಗೌಡ...!!!

error: Content is protected !!
Scroll to Top