(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 28. ರೂಪಾಂತರಿ ತಳಿ ಓಮಿಕ್ರಾನ್ ಆತಂಕದ ಹಿನ್ನೆಲೆ ರಾಜ್ಯ ಸರ್ಕಾರ ವಿಧಿಸಿರುವ ನೈಟ್ ಕರ್ಫ್ಯೂ ಇಂದಿನಿಂದ ಜಾರಿಯಾಗಲಿದ್ದು, ಮುಂದಿನ 10 ದಿನಗಳ ಕಾಲ ಪ್ರತೀ ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಾಣಿಜ್ಯ ಚಟುವಟಿಕೆ ಹಾಗೂ ಅನಗತ್ಯ ಸಂಚಾರಕ್ಕೆ ನಿರ್ಬಂಧ ಇರಲಿದೆ.
ಅಲ್ಲದೇ ಇದರ ಜೊತೆಗೆ ಸಭೆ-ಸಮಾರಂಭ, ಸಮಾವೇಶ ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ 300ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ನಿಯಮವನ್ನೂ ಕೂಡ ಅಳವಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಕಳೆದ ಭಾನುವಾರದಂದು ನಡೆದ ಸಭೆಯ ಬಳಿಕ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆಯವರೆಗೆ ಕರ್ಪ್ಯೂ ಜೊತೆಗೆ ಕೆಲವು ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಇದರನ್ವಯ ರಾಜ್ಯದಲ್ಲಿ ಡಿ. 28ರಿಂದ ಜ. 07ರ ವರೆಗೆ ರಾತ್ರಿಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅನಗತ್ಯ ಸುತ್ತಾಟ, ಜನ ಸೇರುವಿಕೆ, ಸಾರ್ವಜನಿಕ ಸ್ಥಳಗಳಲ್ಲಿನ ಕಾರ್ಯಕ್ರಮಗಳು, ಬಾರ್, ಪಬ್, ರೆಸ್ಟೋರೆಂಟ್ ಹಾಗೂ ಚಲನಚಿತ್ರ ಮಂದಿರ ಸೇರಿದಂತೆ ಅಗತ್ಯ ಸೇವೆಯಲ್ಲದ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.