(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 17. ಅಮಾಯಕರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು ಕಟ್ಟುಕಥೆಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದ್ದು, ಇದು ಬರ್ಬರ ಲಾಠಿಚಾರ್ಜ್ ಪ್ರಮಾದವನ್ನು ಮುಚ್ಚಿ ಹಾಕುವ ಪಿತೂರಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಹೇಳಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಡಿ.14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಹಲ್ಲೆ, ಠಾಣೆಯ ಮೇಲೆ ಕಲ್ಲೆಸೆತ, ಆ್ಯಂಬುಲೆನ್ಸ್ ನಲ್ಲಿ ಮಾರಕಾಯುಧ ಸಾಗಾಟ, ಗಲಭೆ ಪಿತೂರಿ, ಪೊಲೀಸ್ ಜೀಪ್ ಗೆ ಹಾನಿ ಮೊದಲಾದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವುಗಳು. ಪೊಲೀಸ್ ಲಾಠಿಚಾರ್ಜ್ ನಡೆಸಿದ ಬಳಿಕವೂ ಪೊಲೀಸ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್ ಠಾಣೆಯ ಮುಂಭಾಗದಲ್ಲಿ ನಿಂತಿರುವುದು ಕಂಡುಬರುತ್ತದೆ. ಆ ವೇಳೆ ಅವರ ಕೈಯಲ್ಲಿ ಯಾವುದೇ ಗಾಯದ ಗುರುತಾಗಲೀ, ಬ್ಯಾಂಡೇಜ್ ಕಟ್ಟಿದ ಕುರುಹು ಆಗಲೀ ಕಂಡುಬರುವುದಿಲ್ಲ. ಲಾಠಿ ಚಾರ್ಜ್ ನಡೆದು ಜನರು ಚದುರಿ ಹೋಗುವವರೆಗೂ ಪೊಲೀಸರ ಮೇಲೆ ದಾಳಿ ನಡೆಸಿದ ಬಗ್ಗೆ ಯಾವುದೇ ಸುದ್ದಿಗಳು ಬಂದಿರಲಿಲ್ಲ. ಆದರೆ ಬರ್ಬರ ಲಾಠಿಚಾರ್ಜ್ ನಿಂದ ಪ್ರತಿಭಟನಾಕಾರರು ಗಂಭೀರ ಗಾಯಗೊಂಡ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕವಷ್ಟೇ ಈ ಅರೋಪಗಳು ಕೇಳಿ ಬಂದವು. ನಂತರ ದಾಖಲಿಸಲಾದ ಎಫ್.ಐ.ಆರ್ ಗಳಲ್ಲಿ ಒಂದೊಂದೇ ಆರೋಪಗಳನ್ನು ಸೇರಿಸಲಾಯಿತು. ಈಗಾಗಲೇ ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಹಾರ್ಡ್ ಡಿಸ್ಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರತಿಭಟನಾಕಾರರು ದಾಳಿ ನಡೆಸುವ ದೃಶ್ಯಗಳಿದ್ದರೆ ಇನ್ನು ಕೂಡಾ ಯಾಕಾಗಿ ಬಹಿರಂಗಪಡಿಸಿಲ್ಲ? ಇಡೀ ದಿನ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಶಾಂತಿಯುತವಾಗಿ ವರ್ತಿಸಿದ್ದರು ಮತ್ತು ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿರಲಿಲ್ಲ. ಪ್ರತಿಭಟನಕಾರರು ನಾಯಕರ ಸೂಚನೆಯನ್ನು ಪಾಲಿಸುತ್ತಾ ಸಂಯಮದೊಂದಿಗೆ ವರ್ತಿಸುತ್ತಾ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನಷ್ಟೇ ಕೂಗಿದ್ದರು. ಇದಕ್ಕೆ ವೀಡಿಯೋ ದೃಶ್ಯಾವಳಿಗಳೇ ಸಾಕ್ಷಿಯಾಗಿವೆ. ಘಟನೆಯ ದಿನದಂದು ಸಂಘಟನೆಯ ಜಿಲ್ಲಾ ನಾಯಕರು ಡಿವೈಎಸ್ಪಿ ಅವರೊಂದಿಗೆ ರಾತ್ರಿ 1 ಗಂಟೆಯ ವರೆಗೆ ನಿರಂತರ ಮಾತುಕತೆ ನಡೆಸುತ್ತಿದ್ದಾಗಲೂ ಈ ಹುಸಿ ಆರೋಪಗಳ ವಿಚಾರವೇ ಕೇಳಿ ಬಂದಿರಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೂ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನಾಲ್ಕು ಮಂದಿ ಸಿಬ್ಬಂದಿಗಳು ಗಾಯಗೊಂಡಿದ್ದಾರಷ್ಟೇ ಎಂದು ಹೇಳಿಕೆ ನೀಡಿದ್ದಾರೆ ಹೊರತು ಇತರ ಘಟನೆಗಳ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಮಂಗಳೂರಿನಲ್ಲಿ ನಡೆದ ಎನ್.ಆರ್.ಸಿ ಪ್ರತಿಭಟನೆಯ ವೇಳೆಯೂ ಪೊಲೀಸರು ತಮ್ಮ ಪ್ರಮಾದಗಳನ್ನು ಮುಚ್ಚಿ ಹಾಕಲು ಹಲವು ಕಟ್ಟು ಕಥೆಗಳನ್ನು ಕಟ್ಟಿದ್ದರು. ನಂತರದಲ್ಲಿ ಅದರ ವಾಸ್ತವಾಂಶಗಳು ಬಯಲಾಗಿದ್ದವು. ಇದು ಇಡೀ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿತ್ತು.
ಪೊಲೀಸರು ಇದೀಗ ಉಪ್ಪಿನಂಗಡಿ ಘಟನೆಯಲ್ಲಿ ತಮ್ಮ ಗಂಭೀರ ಪ್ರಮಾದವನ್ನು ಮುಚ್ಚಿಹಾಕಲು ಈ ರೀತಿಯ ಕಟ್ಟುಕಥೆಗಳನ್ನು ಹರಡುತ್ತಿರುವುದು ಸಮ್ಮತಾರ್ಹವಲ್ಲ. ಪ್ರತಿಭಟನಕಾರರು ಶಾಂತಿ ಕದಡುವ ಪ್ರಯತ್ನ ಮಾಡಿದ್ದರೇ, ಅದರ ಬಗ್ಗೆ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲಿ ಹೊರತು ಸಾರ್ವಜನಿಕರ ದಿಕ್ಕು ತಪ್ಪಿಸಲು ಯತ್ನಿಸುವುದು ಸರಿಯಲ್ಲ. ಸಂಘಟನೆಯ ನಾಯಕರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವಾಗ, ಏಕಾಏಕಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಲವಾರು ಪ್ರತಿಭಟನಾಕಾರರು ಗಾಯಗೊಳ್ಳಲು ಕಾರಣವಾಯಿತು. ಪೊಲೀಸರು ಸುಳ್ಳು ಸುದ್ದಿ ಹರಡದೇ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು. ಪಾಪ್ಯುಲರ್ ಫ್ರಂಟ್ ಈ ನೆಲದ ಕಾನೂನಿನ ಮೇಲೆ ಗೌರವವಿರಿಸಿರುವ ಸಂಘಟನೆಯಾಗಿದೆ ಮತ್ತು ತನ್ನ ವಿರುದ್ಧದ ಆರೋಪಗಳನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನುಬದ್ಧವಾಗಿಯೇ ಎದುರಿಸಲಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸುತ್ತದೆ. ಸಂದರ್ಭದಲ್ಲಿ ಕೆ.ಅಶ್ರಫ್, ರಾಜ್ಯ ಕಾರ್ಯದರ್ಶಿ, ಪಾಪ್ಯುಲರ್ ಫ್ರಂಟ್ ಕರ್ನಾಟಕ, ಇಜಾಝ್ ಅಹ್ಮದ್ ಅಧ್ಯಕ್ಷರು, ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲೆ, ಖಾದರ್ ಕುಳಾಯಿ ಅಧ್ಯಕ್ಷರು, ಪಾಪ್ಯುಲರ್ ಫ್ರಂಟ್ ಮಂಗಳೂರು ನಗರ ಮೊದಲಾದವರು ಉಪಸ್ಥಿತರಿದ್ದರು.