ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಡಿ. 23ರಂದು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೆ ತರಬೇತಿ ➤ ದ.ಕ. ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ಜನವರಿ 1, 2022ಕ್ಕೆ 18 ವರ್ಷ ಪೂರ್ಣಗೊಳ್ಳುವವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅನುಕೂಲವಾಗುವಂತೆ ಡಿ.23ರಂದು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ನವಮತದಾರರ ನೋಂದಣಿಗೆ ಜಿಲ್ಲಾಡಳಿತದಿಂದ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷ ಪೂರ್ಣಗೊಂಡು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವರ ಹೆಸರನ್ನು ಸಂಸ್ಥೆಗಳ ಮುಖ್ಯಸ್ಥರು ಸಿದ್ದಪಡಿಸಿ ಇಟ್ಟುಕೊಳ್ಳುವಂತೆ ಡಿಸಿ ನಿರ್ದೇಶನ ನೀಡಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಎಲ್ಲಾ ಸಂಸ್ಥೆಗಳ ಪ್ರಾಂಶುಪಾಲರಿಗೆ ಮೇಲುಸ್ತುವಾರಿ ವಹಿಸಿಕೊಡಲಾಗಿದೆ. ಅಲ್ಲದೇ ಜಿಲ್ಲೆಯ ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸಲು ಮಂಗಳೂರು ವಿವಿಯ ರಿಜಿಸ್ಟ್ರಾರ್ ಡಾ. ಕಿಶೋರ್, ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ನೋಂದಣಿಯ ಮೇಲುಸ್ತುವಾರಿಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ದೇವಿಪ್ರಸಾದ್, ಎಲ್ಲಾ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೇಲುಸ್ತುವಾರಿ ವಹಿಸಲು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ಜಯಕರ ಭಂಡಾರಿ ಹಾಗೂ ಜಿಲ್ಲೆಯ ಎಲ್ಲಾ ಪಾಲಿಟೆಕ್ನಿಕ್ ಹಾಗೂ ಐಟಿಐ ಸಂಸ್ಥೆಗಳಲ್ಲಿ ಈ ಪ್ರಕ್ರಿಯೆಯನ್ನು ಮೇಲುಸ್ತುವಾರಿ ವಹಿಸಲು ಕರ್ನಾಟಕ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Also Read  ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿಗೆ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

error: Content is protected !!
Scroll to Top