(ನ್ಯೂಸ್ ಕಡಬ) newskadaba.com ಬೆಂಗಳೂರು, ನ.04. 2018 ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಅನ್ವಯ ಟಿಕೆಟ್ ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಅವರು ಶನಿವಾರದಂದು ನಗರದ ಅರಮನೆ ಮೈದಾನದಲ್ಲಿರುವ ಟೆನ್ನಿಸ್ ಪೆವಿಲಿಯನ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಪ್ರಮುಖ ಪಾತ್ರವಹಿಸಿ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು.
ರಾಜ್ಯದ 224 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇವಲ 10 ಮಂದಿ ಮಹಿಳಾ ಕೋಟಾದಲ್ಲಿ ಮಾತ್ರ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆಯಾಗಿದೆ. ಗೆಲ್ಲುವ ಸಾಮರ್ಥ್ಯ ಇರುವ ಕಡೆ ನೀವು ಅರ್ಜಿ ಹಾಕಿ, ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ಮಹಿಳಾ ಮೀಸಲಾತಿ ಪರ ಇರುವವರು ನಾವು. ಶೇ.33ರಷ್ಟು ಮೀಸಲಾತಿ ಕೇಳಿದರೂ ಕೊಡುತ್ತೇವೆ. ನೀವು ಟಿಕೆಟ್ ಕೇಳುವ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಮತದಾರರ ಪೈಕಿ ಶೇ.50ರಷ್ಟು ಮಹಿಳೆಯರಿದ್ದಾರೆ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಎಚ್ಚೆತ್ತುಕೊಂಡು ಜನರನ್ನು ತಲುಪುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮಹಿಳೆಯರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಈ ಬಗ್ಗೆ ಎಚ್ಚರವಹಿಸಬೇಕೆಂದು ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ವಿಶ್ವಮಟ್ಟದಲ್ಲಿ ಉಕ್ಕಿನ ಮಹಿಳೆ ಎಂಬ ಬಿರುದನ್ನು ಪಡೆದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಮಹಿಳೆಯರು ಮತ್ತು ಬಡವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರಿಗೆ ರಾಜಕೀಯ ಶಕ್ತಿ ಕೊಟ್ಟ ನಾಯಕಿಯ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.
ಇಂದಿರಾಗಾಂಧಿ ಜನ್ಮಶತಮಾನೋತ್ಸವದ ಅಂಗವಾಗಿ ನ.19ರಂದು ಮಹಿಳಾ ಕಾಂಗ್ರೆಸ್ ವತಿಯಿಂದ ದೀಪನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಪ್ರತಿಯೊಂದು ಬೂತ್‌ನಲ್ಲಿಯೂ 100 ಮಂದಿ ಮಹಿಳಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ರಾಜ್ಯ ಸರಕಾರ ಮತ್ತು ಇಂದಿರಾಗಾಂಧಿಯ ಸಾಧನೆಯನ್ನು ಜನರಿಗೆ ತಲುಪಿಸಬೇಕು. ಅರಿಶಿನ ಮತ್ತು ಕುಂಕುಮ ನೀಡಿ ಆಶೀರ್ವಾದ ಪಡೆಯಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸುಷ್ಮಿತಾ ದೇವ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್, ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿಗೌಡ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಮಹಿಳಾ ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರಾಣಿ ಸತೀಶ್, ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ, ಜಯಮ್ಮ, ನಟಿ ಭಾವನಾ, ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.