(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 10. ರಾಜ್ಯದ ಜನತೆ ಈಗಾಗಲೇ ಅಗತ್ಯ ವಸ್ತುಗಳಾದ ಗ್ಯಾಸ್, ತರಕಾರಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಿಂದ ಜರ್ಜರಿತರಾಗಿದ್ದು, ಹೀಗಿರುವಾಗಲೇ ರಾಜ್ಯದಲ್ಲಿನ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಬೆಲೆಯನ್ನು ಏರಿಸಲು ಮುಂದಾಗಿದ್ದು, ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ದೊಡ್ಡ ಶಾಕ್ ನೀಡಲು ಮುಂದಾಗಿದೆ.
ಈ ಸಂಬಂಧ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಸ್ಕಾಂ ಹಾಗೂ ಚೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ವಿದ್ಯುತ್ ಉತ್ಪಾದನಾ ವೆಚ್ಚದ ಏರಿಕೆಯಿಂದ ನಷ್ಟ ಅನುಭವಿಸುತ್ತಿದ್ದು, ಇದನ್ನು ಸರಿದೂಗಿಸುವ ಹಿನ್ನೆಲೆ ಪ್ರತೀ ಯುನಿಟ್ ವಿದ್ಯುತ್ ದರವನ್ನು ರೂ.1.50 ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿವೆ.
ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗೆ ಕೆಇಆರ್ ಸಿ ಒಪ್ಪಿಗೆ ಸೂಚಿಸಿದರೆ, ಸದ್ಯದಲ್ಲೇ ರಾಜ್ಯದಲ್ಲಿ ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ ಹೆಚ್ಚಳವಾಗಲಿದ್ದು, ಈ ಮೂಲಕ ಜನತೆಗೆ ವಿದ್ಯುತ್ ದರ ಏರಿಕೆಯ ಹೊರೆ ಕೂಡಾ ಬೀಳಲಿದೆ. ಇದಕ್ಕೆ ಸಂಬಂಧಿಸಿ ಕೆಇಆರ್ ಸಿ ಹಾಗೂ ರಾಜ್ಯ ಸರ್ಕಾರ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.