(ನ್ಯೂಸ್ ಕಡಬ) newskadaba.com ಕಾಪು, ಡಿ.10. ಪಾಂಗಾಳ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಜೀರ್ಣೋದ್ಧಾರ ಕೆಲಸದ ಪೂರ್ವಭಾವಿಯಾಗಿ ಆರೂಢ ಪ್ರಶ್ನೆಯನ್ನು ಮಂಗಳೂರಿನ ಪ್ರಸಿದ್ಧ ಜ್ಯೋತಿಷ್ಯರಾದ ಶಶಿ ಕುಮಾರ್ ಪಂಡಿತ್ ಇವರ ನೇತೃತ್ವದಲ್ಲಿ, ಕ್ಷೇತ್ರದ ತಂತ್ರಿಗಳಾದ ಉಂಡಾರು ನಾಗರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಇರಿಸಲಾಗಿತ್ತು. ಇಟ್ಟಂತಹ ಪ್ರಶ್ನೆಯಲ್ಲಿ ಅಚ್ಛರಿಯ ವಿಷಯವೊಂದು ಗೋಚರವಾಗಿದೆ.
ಸ್ಥಳದ ಚರಿತ್ರೆಯ ಬಗ್ಗೆ ಜಾಗದ ಬಗ್ಗೆ ವಿಮರ್ಶೆ ಮಾಡಿದ ಜ್ಯೋತಿಷ್ಯರು ಒಂದು ಅಚ್ಚರಿಯ ಸಂಗತಿಯನ್ನು ತಿಳಿಸಿದ್ದರು. ಅದೇನೆಂದರೆ ಈ ಪಾಂಗಾಳ ಆಲಡೆಯ ನೈರುತ್ಯ ಭಾಗದಲ್ಲಿ ಸರಿಸುಮಾರು ನೂರು ಮೀಟರ್ ಅಂತರದಲ್ಲಿ ಪ್ರಾಚೀನ ಕಾಲದಲ್ಲಿ ಒಂದು ಮಠವಿತ್ತು, ಅದರಲ್ಲಿ ಅನೇಕ ವೈಷ್ಣವ ಸಂಬಂಧಿ ವಿಗ್ರಹಗಳ ಅವಶೇಷಗಳು ಹಾಗೂ ತೀರ್ಥ ಬಾವಿ ಇದ್ದು, ಇದೀಗ ಆ ಮಠವು ಸಂಪೂರ್ಣ ನಾಶವಾಗಿದ್ದು ಅಲ್ಲಿನ ಎಲ್ಲಾ ಆರಾಧನಾ ವಸ್ತುಗಳು ಮಣ್ಣಿನಲ್ಲಿ ಅವಶೇಷವಾಗಿದೆ. ಮಾತ್ರವಲ್ಲದೇ ಆ ಜಾಗದಲ್ಲಿ ಇದ್ದಂತಹ ಒಂದು ವಿಷ್ಣು ಸಾನಿಧ್ಯವು ಪಾಂಗಾಳ ಆಲಡೆಯಲ್ಲಿ ನಿಗೂಢವಾದ ರೀತಿಯಲ್ಲಿ ಬಂದು ಸೇರಿದ್ದು ಕ್ಷೇತ್ರಕ್ಕೆ ಬರುವ ಭಕ್ತ ಜನರ ಅಭೀಷ್ಟಗಳನ್ನು ಈ ಸಾನಿಧ್ಯವು ಮೂಲ ಬೆರ್ಮೆರ ಸಾನಿಧ್ಯದ ಜೊತೆಗೆ ನಿಂತು ಈಡೇರಿಸುತ್ತಿದೆ.
ನೈರುತ್ಯ ಭಾಗದಲ್ಲಿ ನಾಶವಾಗಿರುವ ಮಠವು ಪ್ರಾಚೀನ ಕಾಲದಲ್ಲಿ ಈ ಆಲಡೆಯ ಜಾಗಕ್ಕೆ ಸಂಬಂಧಿಸಿದ ಮಠವೇ ಆಗಿದ್ದು ಅಲ್ಲಿನ ಸಾನಿಧ್ಯಕ್ಕೂ ಆಲಡೆಯಲ್ಲಿ ಇರುವಂತಹ ಸಾನಿಧ್ಯಕ್ಕೂ ಅವಿನಾಭಾವ ಸಂಬಂಧ ಇದೆ ಎನ್ನುವ ವಿಷಯವು ಪ್ರಶ್ನೆಯಲ್ಲಿ ಗೋಚರಿಸಿತ್ತು. ಊಹಿಸಲಾಗದಷ್ಟು ಪ್ರಾಚೀನವಾದ ಈ ಲಕ್ಷ್ಮೀನಾರಾಯಣ ದೇವರ ಪಂಚಲೋಹದ ಮೂರ್ತಿಯು ದೈವಗಳ ಭಂಡಾರ ಚಾವಡಿಯಲ್ಲಿಯೇ ಲಭಿಸಿದ್ದು, ಇನ್ನುಳಿದ ಮೂರ್ತಿಗಳ ಬಗ್ಗೆ ಪ್ರಶ್ನೆಯಲ್ಲಿ ತಿಳಿಸಿದ ನೈರುತ್ಯ ಭಾಗದ ಜಾಗದ ಬಳಿ ಹೋಗಿ ಪರಿಶೀಲನೆಯನ್ನು ನಡೆಸಿದಾಗ ಅಲ್ಲಿ ಒಂದು ಪುರಾತನ ಬಾವಿಯೂ ಕೂಡ ಪತ್ತೆಯಾಗಿದೆ. ಬಾವಿಯಲ್ಲಿ ಇಳಿದು ಶೋಧನೆ ಮಾಡಲೆಂದು ಕ್ಷೇತ್ರ ಅಧಿಕಾರಿಗಳು ಯತ್ನಿಸಿದಾಗ ಬಾವಿಯ ಬಳಿ ನಾಗರ ಹಾವು ಗೋಚರಿಸಿದ್ದು, ಶೋಧ ಕಾರ್ಯದಲ್ಲಿ ಇದ್ದವರು ಭಯಗೊಂಡು ವಾಪಾಸ್ ಬಂದಿದ್ದಾರೆ. ನಂತರ ಡಿಸೆಂಬರ್ 5 ರಂದು ಪ್ರಶ್ನೆಯನ್ನು ಮುಂದುವರೆಸಲಾಗಿದ್ದು ಆಗ ಇನ್ನಷ್ಟು ಅಚ್ಛರಿಯ ವಿಷಯಗಳು ಕಂಡು ಬಂದಿತ್ತು.
ಪ್ರಶ್ನೆಯಲ್ಲಿ ಕಂಡು ಬಂದ ವಿಷಯ:
1) ಈ ವಿಗ್ರಹವು ಊಹಿಸಲಾಗದಷ್ಟು ಪ್ರಾಚೀನತೆಯನ್ನು , ಇತಿಹಾಸವನ್ನು ಹೊಂದಿದೆ.
2) ಈ ವಿಗ್ರಹವನ್ನು ಆರಾಧಿಸುತ್ತಿದ್ದ ಮಠ ಹಾಗೂ ಆಲಡೆ ಇರುವಂತಹ ಜಾಗಕ್ಕೆ ಪೂರ್ವ ಕಾಲದಿಂದಲೂ ಅವಿನಾಭಾವ ಸಂಬಂಧ ಇತ್ತು.
3) ರಾಜ ಮನೆತನದವರಿಗೆ ರಾಜ ಗುರುಗಳಾಗಿ ಇದ್ದಂತಹ ಒಂದು ಮಠದಲ್ಲಿ ಆರಾಧನೆಯಾಗುತ್ತಿದ್ದಂತಹ ವಿಗ್ರಹವು ಇದಾಗಿದೆ.
4) ವೈವಾಹಿಕ ವಿಷಯದಲ್ಲಿ ಅಡೆತಡೆಗಳು ಅದೇ ಪ್ರಕಾರ ಸಂತಾನ ಪ್ರತಿಬಂಧಕ ಇದ್ದವರಿಗೆ ಈ ದೇವರ ಆರಾಧನೆಯಿಂದ ಅಭಿವೃದ್ಧಿಯು ಆಗುತ್ತದೆ.
5) ತುಳುವ ಕಟ್ಟಳೆಯಲ್ಲಿ ಬೆರ್ಮೆರ್ ಅಥವಾ ಉಲ್ಲಯ ಎನ್ನುವ ಸಾನಿಧ್ಯ ಕೂಡ ಸಂತಾನ ಕೊಡುವಂತಹ ಸಾನಿಧ್ಯವಾಗಿದ್ದು, ಇದೀಗ ಆ ಬ್ರಹ್ಮಲಿಂಗೇಶ್ವರನ ಸನ್ನಿಧಾನದಲ್ಲಿ ಇರುವ ನಾಗ ಬನದ ಬಳಿಯಲ್ಲಿ ಗುಡಿ ಕಟ್ಟಿ ಈ ವಿಗ್ರಹವನ್ನು ಪೂಜಿಸಬೇಕು ಎಂದು ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.
6) ಬೆರ್ಮೆರ ಪಾದೆ ಎಂದು ಅನಾದಿಕಾಲದಿಂದಲೂ ಊರ ಜನರು ಹೇಳುತ್ತಿದ್ದ ದೊಡ್ಡ ಬಂಡೆಯು ಈ ಪ್ರಾಚೀನ ವಿಗ್ರಹದ ಮೂಲ ಆಶ್ರಯ ಜಾಗವಾಗಿದ್ದದ್ದು ಬಹಳ ವಿಶೇಷ.
7) ಇಷ್ಟು ಮಾತ್ರವಲ್ಲದೇ ಈ ಆಲಡೆಯಲ್ಲಿ ಇರುವಂತಹ ಬ್ರಹ್ಮಲಿಂಗೇಶ್ವರ ಹಾಗೂ ಕುಮಾರನ ಸಾನಿಧ್ಯವು ಪಾಂಗಾಳ ಆದಿ ಆಲಡೆಯ ಭಕ್ತರ ಸರ್ವ ಅಭೀಷ್ಟಗಳನ್ನು ಕೂಡಾ ಶೀಘ್ರದಲ್ಲಿ ಈಡೇರಿಸುತ್ತದೆ ಹಾಗೂ ಒಳ್ಳೆಯ ಕಾರ್ನಿಕವನ್ನು ಹೊಂದಿರುವ ಮೂಲ ಸನ್ನಿಧಾನವು ಇದಾಗಿದೆ ಎಂದು ಆರೂಢ ಪ್ರಶ್ನೆಯಲ್ಲಿ ಕಂಡು ಬಂದಿದೆ.