ಮೂರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿ ದಿಢೀರ್ ಪ್ರತ್ಯಕ್ಷ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 08. ಮೂರು ತಿಂಗಳ ಹಿಂದೆ ಮೃತಪಟ್ಟ ಸಿ ನಾಗರಾಜಪ್ಪ ಎಂಬ ವ್ಯಕ್ತಿಯೋರ್ವ ದಿಢೀರ್ ಪ್ರತ್ಯಕ್ಷವಾಗಿ ಶಾಕ್ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಈ ಹಿಂದೆ ನಾಗರಾಜಪ್ಪ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ನೀಡಲಾಗಿತ್ತು. ಅಲ್ಲದೇ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರವನ್ನೂ ಕೂಡಾ ಮಾಡಲಾಗಿತ್ತು. ಮಾತ್ರವಲ್ಲ ಅವರ ನಾಪತ್ತೆ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕಿದ್ದರು. ಇದರ ಬೆನ್ನಲ್ಲೇ ಮೂರು ತಿಂಗಳ ಬಳಿಕ ನಾಗರಾಜಪ್ಪ ನೇರವಾಗಿ ದಿಢೀರ್ ಮನೆಗೆ ಬಂದು ಕುಟುಂಬಕ್ಕೆ ಅಚ್ಚರಿ ಮೂಡಿಸಿದ್ದಾನೆ.

 


ಮದ್ಯ ಚಟಕ್ಕೆ ತುತ್ತಾಗಿದ್ದ ಈತನನ್ನು ವಿವಿಧ ಖಾಯಿಲೆಯ ಹಿನ್ನೆಲೆ ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ಅವರನ್ನು ಕೋರಮಂಗಲದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ನಾಗರಾಜಪ್ಪ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡದೆ ತಪ್ಪಿಸಿಕೊಂಡಿದ್ದರು. ಈ ಕುರಿತು ಕುಟುಂಬಸ್ಥರು ನಾಪತ್ತೆ ಪ್ರಕರಣವನ್ನು ದಾಖಲಿಸಿ ಆತಂಕದಲ್ಲಿದ್ದರು. ಈ ನಡುವೆ ಸೆಪ್ಟೆಂಬರ್ 18 ರಂದು ಆಸ್ಪತ್ರೆಯ ಭದ್ರತಾ ಸಿಬ್ಬಂದಿ, ನಾಗರಾಜಪ್ಪ ಅವರ ಮಗಳನ್ನು ಸಂಪರ್ಕಿಸಿ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಮೃತ ವ್ಯಕ್ತಿಗೂ ನಾಗರಾಜಪ್ಪ ಅವರ ದೇಹಕ್ಕೂ ಸಾಮ್ಯತೆ ಕಂಡುಬಂದ ಹಿನ್ನೆಲೆ ಮರಣೋತ್ತರ ಪರೀಕ್ಷೆಯ ಬಳಿಕ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಿದ್ದೆವು ಎಂದು ಕುಟುಂಬ ಮೂಲಗಳು ತಿಳಿಸಿದ್ದರು.

Also Read  ಮಂಗಳೂರು: ವಿವಿ ಕಾಲೇಜಿನಲ್ಲಿ ಹೊಡೆದಾಟ ಪ್ರಕರಣ ➤ ಆರು ವಿದ್ಯಾರ್ಥಿಗಳ ವಿರುದ್ದ ಎಫ್ಐಆರ್ ದಾಖಲು


ಸದ್ಯ ನಾಗರಾಜಪ್ಪ ಜೀವಂತವಾಗಿ ಮನೆಗೆ ಬಂದಿದ್ದು, ಆಸ್ಪತ್ರೆಯ ಚಿಕಿತ್ಸೆ ಇಷ್ಟವಿಲ್ಲದ ಕಾರಣ ಅಲ್ಲಿಂದ ತಪ್ಪಿಸಿಕೊಂಡಿದ್ದೆ ಎಂದು ತಿಳಿಸಿದ್ದಾರೆ. ಮೂರು ಮಕ್ಕಳ ತಂದೆಯಾಗಿರುವ ನಾಗರಾಜಪ್ಪ ಅವರ ಜೀವಂತ ಮರಳುವಿಕೆಯಿಂದಾಗಿ ಕುಟುಂಬದಲ್ಲಿ ಸಂತಸ ಮನೆಮಾಡಿದೆ.

 

 

error: Content is protected !!
Scroll to Top