ನೂತನ ತಂತ್ರಜ್ಞಾನ ಬಳಸಿ ಬಿಲ್ಡಿಂಗ್ ನಿರ್ಮಾಣದ ತ್ಯಾಜ್ಯದಿಂದ ಆಗುತ್ತಿರುವ ಮಾಲಿನ್ಯ ಕಡಿಮೆಗೊಳಿಸಿ ➤ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 02. ನಗರದ ಮಾಲಿನ್ಯಕ್ಕೆ ಕಟ್ಟಡ ನಿರ್ಮಾಣದ ತ್ಯಾಜ್ಯ ಪ್ರಮುಖ ಕಾರಣವಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಸಿ.ಎನ್‌ ಅಶ್ವಥ್ಥ ನಾರಾಯಣ ಅವರು ಬಿಲ್ಡರ್ಸ್‌ಗಳಿಗೆ ಕರೆ ನೀಡಿದರು.

 

ನಗರದ ಖಾಸಗಿ ಹೋಟೆಲ್‌ ನಲ್ಲಿ ಬಿಲ್ಡರ್ಸ್‌ ಅಸೋಷಿಯೇಷನ್‌ ಬೆಂಗಳೂರು ಕೇಂದ್ರ ಆಯೋಜಿಸಿದ್ದ ಬಿಲ್ಡರ್ಸ್‌ ಡೇ ನಲ್ಲಿ ಭಾಗವಹಿಸಿದ ಅವರು, ಭಾರತ ರತ್ನ ಸರ್.ಎಂ
ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು. ನಗರಗಳ ಬೆಳವಣಿಗೆಯಲ್ಲಿ ಬಿಲ್ಡರ್ಸ್ ಗಳ ಕೊಡುಗೆ ಅಪಾರ. ಸುಂದರ, ಆಧುನಿಕ ಹಾಗೂ ಕಡಿಮೆ ಸಮಸ್ಯೆಗಳನ್ನು ಹೊಂದುವ ನಗರಗಳ ನಿರ್ಮಾಣಕ್ಕೆ ನಮ್ಮಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ. ಸಿಟಿ ಡೆವಲಪ್‌ಮೆಂಟ್ ಪ್ಲಾನ್ ನಲ್ಲಿ ಇರುವ ದೊಡ್ಡ ಕೊರತೆ ಇದು. ಮುಂಬರುವ ಬೆಂಗಳೂರು ಸಿಡಿಪಿ ಯಲ್ಲಿ ಈ ಬಗ್ಗೆ ನಾವೆಲ್ಲರೂ ಸ್ಪಷ್ಟತೆಯನ್ನು ಹೊಂದಬೇಕಾಗಿದೆ ಎಂದರು.

Also Read  KPSC ಪರೀಕ್ಷೆ ಮುಂದೂಡಿಕೆ ಇಲ್ಲ, ನಾಳೆಯೇ ಪರೀಕ್ಷೆ  ಸರ್ಕಾರ ಸ್ಪಷ್ಟನೆ   

 

ನಮ್ಮ ನಗರದ ನಿರ್ಮಾಣದ ಬಗ್ಗೆ ಸ್ಪಷ್ಟ ಯೋಜನೆ ಹೊಂದುವುದು ಅವಶ್ಯ. ಇದರಿಂದ ನಮ್ಮ ನಗರಗಳನ್ನು ಇನ್ನಷ್ಟು ಸುಂದರಗೊಳಿಸಬಹುದು. ಅಲ್ಲದೇ, ಕಟ್ಟಡ ನಿರ್ಮಾಣದಲ್ಲಿ ಉಂಟಾಗುವ ತ್ಯಾಜ್ಯ ನಗರದ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. 2070 ರ ಒಳಗಾಗಿ ಇದನ್ನು ಶೂನ್ಯದತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ. ಕಟ್ಟಡ ನಿರ್ಮಾಣದಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಹಾಗೂ ಕಡಿಮೆ ದರದಲ್ಲಿ ಕಟ್ಟಡ ನಿರ್ಮಾಣ ಮಾಡುವ ದೃಷ್ಟಿಯಿಂದ ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಕಾಸ್ಟ್‌ ಅಂಡ್‌ ಫ್ಯಾಬ್ರಿಕೇಟೆಡ್‌ ತಂತ್ರಜ್ಞಾನವನ್ನು ವಿದೇಶಗಳಲ್ಲಿ ಬಹಳಷ್ಟು ವರ್ಷಗಳಿಂದ ಬಳಸಲಾಗುತ್ತಿದೆ. ಇದರಿಂದಾಗಿ ಉತ್ತಮ ಗುಣಮಟ್ಟ ಹಾಗೂ ಕಡಿಮೆ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ. ಅಲ್ಲದೆ, ಇದಕ್ಕೆ ತಗಲುವ ಸಮಯವೂ ಬಹಳ ಕಡಿಮೆ. ಇಂತಹ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

 

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಬಿ.ಟಿ ಮೋಹನ್‌ ಕೃಷ್ಣ ಹಾಗೂ ಬಿಲ್ಡರ್ಸ್‌ ಅಸೋಷಿಯೇಷನ್‌ ಆಫ್‌ ಇಂಡಿಯಾ ಮಾಜಿ ಅಧ್ಯಕ್ಷ ಹೆಚ್‌.ಎನ್‌. ವಿಜಯರಾಘವ ರೆಡ್ಡಿ ಅವರಿಗೆ ಸರ್‌.ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ಹಿರಿಯ ಬಿಲ್ಡರ್ ಗಳಾದ ಕರ್ನಾಟಕ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮತ್ತು ಕ್ಲಾಸ್‌ 1 ಸಿವಿಲ್‌ ಕಾಂಟ್ರಾಕ್ಟರ್‌ ಎಂ.ತಿಬ್ಬೇಗೌಡ ಅವರನ್ನು ಸನ್ಮಾನಿಸಲಾಯಿತು.

Also Read  ಕಡಬ: ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ನಂದಕುಮಾರ್ ಮಡಿಕೇರಿ ನೇಮಕ

 

ಕಾರ್ಯಕ್ರಮದಲ್ಲಿ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಅನುಚೇತ್‌, ಕರ್ನಾಟಕ ರಾಜ್ಯ ಬಿಲ್ಡರ್ಸ್‌ ಅಸೋಷಿಯೇಷನ್‌ ಅಧ್ಯಕ್ಷ ಎಂ.ರಮೇಶ್‌, ಬೆಂಗಳೂರು ವಿಭಾಗದ ಅಧ್ಯಕ್ಷ ಜಿ.ಎಂ.ರವೀಂದ್ರ, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

error: Content is protected !!
Scroll to Top