ಹಿಂದೂವಿನ ಶವ ಮೇಲಕ್ಕೆತ್ತಿದ ಮುಸ್ಲಿಂಗೆ ಸಹಕರಿಸಿದ ಕ್ರಿಶ್ಚಿಯನ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.11. ನದಿಯಲ್ಲಿ ಮುಳುಗಿ ಮೃತಪಟ್ಟ ಹಿಂದೂ ವ್ಯಕ್ತಿಯ ಮೃತದೇಹವನ್ನು ಮೇಲಕ್ಕೆತ್ತಿದ ಮುಸ್ಲಿಮರಿಗೆ ಶವವನ್ನು ಆಸ್ಪತ್ರೆಗೆ ಸಾಗಿಸಲು ಕ್ರಿಶ್ಚಿಯನ್ ಸಹೋದರನೋರ್ವ ತನ್ನ ಅಂಬ್ಯುಲೆನ್ಸ್ ನ್ನು ನೀಡಿ ಸಹಕರಿಸಿದ ಮಾನವೀಯ ಘಟನೆಗೆ ಬಂಟ್ವಾಳದ ನಗರ ಠಾಣಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗೂಡಿನ ಬಳಿ ಶನಿವಾರ ಸಾಕ್ಷಿಯಾಯಿತು.

ಸದಾ ಒಂದಿಲ್ಲೊಂದು ಕೋಮು ಪ್ರಚೋದಿತ ಘಟನೆಗಳಿಂದ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಮಾನವೀಯ ಘಟನೆಗಳೂ ನಡೆಯುತ್ತದೆ ಎಂಬುವುದಕ್ಕೆ ಪುಷ್ಟಿ ನೀಡಿತು.

ಪುದು ಗ್ರಾಮದ ಕಡೆಗೋಳಿ ಸಮೀಪದ ನಾಣ್ಯ ನಿವಾಸಿ ತಿಮ್ಮಪ್ಪ ಮೂಲ್ಯ (67) ಎಂಬವರು ಜೂ 5 ರಂದು ಕಾಣೆಯಾಗಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಶನಿವಾರ ಇವರ ಮೃತದೇಹ ಗೂಡಿನಬಳಿ ಸಮೀಪದ ಕಂಚಿಕಾರಪೇಟೆ ಎಂಬಲ್ಲಿ ನೇತ್ರಾವತಿ ನದಿ ಮಧ್ಯಭಾಗದಲ್ಲಿ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ನಗರ ಠಾಣಾಧಿಕಾರಿ ರಕ್ಷಿತ್ ಎ.ಕೆ. ಅವರು ಸ್ಥಳೀಯ ಈಜುಪಟು, ನೇತ್ರಾವತಿ ವೀರ ಬಿರುದಾಂಕಿತ ಸತ್ತಾರ್ ಗೂಡಿನಬಳಿ ಹಾಗೂ ಇಬ್ರಾಹಿಂ ಅವರನ್ನು ಸಂಪರ್ಕಿಸಿ ಮೃತದೇಹ ಮೇಲೆತ್ತುವಲ್ಲಿ ಸಹಕಾರ ಕೋರಿದ ಹಿನ್ನಲೆಯಲ್ಲಿ ಸತ್ತಾರ್ ಹಾಗೂ ಇಬ್ರಾಹಿಂ ಅವರು ನೇತ್ರಾವತಿ ನದಿ ಮಧ್ಯಭಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ತೇಲಾಡುತ್ತಿದ್ದ ಮೃತದೇಹವನ್ನು ಮೇಲಕ್ಕೆತ್ತಿದರು. ಬಳಿಕ ಈ ಮೃತ ಶರೀರವನ್ನು ಬಿ.ಸಿ.ರೋಡಿನ ಸಂತೋಷ್ ಅಂಬ್ಯುಲೆನ್ಸ್ ಮಾಲಕ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸಂತೋಷ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದರು.

Also Read  ಅಕ್ರಮವಾಗಿ ಜಾನುವಾರುಗಳ ಸಾಗಾಟ ಪ್ರಕರಣ ➤ 6 ಮಂದಿಯ ಮಧ್ಯಂತರ ಜಾಮೀನು ಅರ್ಜಿ ವಜಾ

ಇತ್ತೀಚೆಗೆ ನಡೆದ ಕಲ್ಲಡ್ಕ ಘಟನೆ ಮಾಸುವ ಮುನ್ನವೇ ನಡೆದ ಇಂತಹದೊಂದು ಅಪರೂಪದ ಸನ್ನಿವೇಶವು ಜಿಲ್ಲೆಯ ಶಾಂತಿಪ್ರಿಯರಿಗೆ ಸಂತಸವನ್ನುಂಟುಮಾಡಿತು. ಎಲ್ಲದರಲ್ಲೂ ಜಾತಿ ಜಾತಿಯೆಂದು ಕುಣಿಯುವವರಿಗೆ ಸಾವಿಗೆ‌ ಜಾತಿಯಿಲ್ಲ ಎನ್ನುವುದನ್ನು ಈ ಘಟನೆಯು ಸಾರಿ ಹೇಳಿತು.

(ವರದಿ: ಪಿ.ಎಂ.ಅಶ್ರಫ್)

error: Content is protected !!
Scroll to Top