ಕಡಬ: ಓಂತ್ರಡ್ಕ ಶಾಲಾ ಸಂಸತ್ ಚುನಾವಣೆ ➤ ವಿದ್ಯುನ್ಮಾನ ಮತಯಂತ್ರ ಬಳಕೆ..!

(ನ್ಯೂಸ್ ಕಡಬ) newskadaba.com ಕಡಬ, ನ. 29. ತಾಲೂಕಿನ ಓಂತ್ರಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣಾ ಮಾದರಿಯಂತೆ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯು ನಡೆಯಿತು. ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರಚಾರ ನಡೆಸಿ, ತಮಗೆ ಮತ ಹಾಕುವಂತೆ ವಿದ್ಯಾರ್ಥಿಗಳನ್ನು ಮನವೊಲಿಸುತ್ತಿದ್ದ ದೃಶ್ಯಗಳು ವಿದ್ಯಾರ್ಥಿಗಳು ಸಾರ್ವತ್ರಿಕ ಚುನಾವಣೆಯಲ್ಲಿಯೇ ಭಾಗವಹಿಸುತ್ತಿದ್ದರೆನೋ ಎಂಬಂತೆ ಗೋಚರಿಸುತ್ತಿತ್ತು. ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಚುನಾವಣೆ ಪ್ರಚಾರ, ಚುನಾವಣೆ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ಜರುಗುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ನೈಜ ಅರಿವು ಮೂಡಿಸಿದವು.


ಪ್ರತೀ ವರ್ಷ ಶಾಲಾ ಸಂಸತ್‍ನಲ್ಲಿ ಮತಪತ್ರಗಳ ಮೂಲಕ ಮತ ಚಲಾಯಿಸುತ್ತಿದ್ದರು. ಆದರೆ ಈ ವರ್ಷ ಮಾತ್ರ ವಿನೂತನವಾಗಿ ಮತದಾನಕ್ಕೆ ಇವಿಎಂ ಬಳಸುವ ರೀತಿಯಲ್ಲಿ ಮೊಬೈಲ್ ವೋಟಿಂಗ್ ಮೆಷಿನ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು. ಇವಿಎಂನಲ್ಲಿ ಇರುವಂತೆ ಒಟ್ಟು ಹತ್ತು ಹುದ್ದೆಗಳಿಗೆ ಹತ್ತು ಮೊಬೈಲ್‍ಗಳನ್ನು ಬಳಸಿ 20 ಅಭ್ಯರ್ಥಿಗಳ ಮಾಹಿತಿಗಳನ್ನು ಸೆಟಿಂಗ್ ಮಾಡಲಾಗಿತ್ತು. ಚುನಾವಣೆ ನಡೆಯುವ ಮೊದಲು ಇವಿಎಂ ಮೆಷಿನ್‍ನಲ್ಲಿರುವ ಬ್ಯಾಲಟಿಂಗ್, ಕ್ಲೋಸ್, ರಿಸಲ್ಟ್, ಕ್ಲಿಯರ್ ಬಟನ್‍ಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಶಿಕ್ಷಕ ದಿಲೀಪ್ ಕುಮಾರ್ ಎಸ್ ಇವರು ಮಾಹಿತಿ ನೀಡಿದ್ದರು.

ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ ಕರ್ತವ್ಯ ನಿರ್ವಹಿದರು. ಟಿ.ಜಿ.ಟಿ ಶಿಕ್ಷಕರಾದ ಮಂಜುನಾಥ್ ಹೆಚ್.ಬಿ ಮತ್ತು ಅತಿಥಿ ಶಿಕ್ಷಕಿಯಾದ ಅನಿತಾ.ಕೆ ಇವರು ಮತಗಟ್ಟೆ ಅಧಿಕಾರಿಯಾಗಿದ್ದರು. ಶಾಲಾ ಹಿರಿಯ ಶಿಕ್ಷಕಿ ಮೇರಿ ಕೆ.ಎಂ ಇವರು ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. 27ರ ಶನಿವಾರ 10:30 ರಿಂದ 12:00 ರವರೆಗೆ ಮತದಾನ ಬಹುಶಿಸ್ತಿನಿಂದಲೇ ನಡೆಯಿತು. ಭಾವಿ ಮತದಾರರು ಸರದಿ ಸಾಲಿನಲ್ಲಿ ನಿಂತು ಕೈಗೆ ಮಸಿ ಹಾಕಿಸಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮೊಬೈಲ್ ವೋಟಿಂಗ್ ಮಷಿನ್ ಬಟನ್ ಒತ್ತುವುದರ ಮೂಲಕ ಮತ ಚಲಾಯಿಸಿದರು. 5 ರಿಂದ 8 ನೇ ತರಗತಿಯವರೆಗಿನ ಮಕ್ಕಳಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು. ಶೇ 100 ರಷ್ಟು ಮತದಾನವಾಗಿರುವುದು ವಿಶೇಷವಾಗಿತ್ತು.

Also Read  ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ನಾಳೆ ಹೊಸ ಮಾರ್ಗಸೂಚಿ ಪ್ರಕಟ ➤ ಸಿಎಂ ಬೊಮ್ಮಾಯಿ                                                                               

ಮತದಾನ ಮಾಡಲು ಪತ್ಯೇಕ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಇಬ್ಬರು ವಿಧ್ಯಾರ್ಥಿಗಳನ್ನು ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾಗಿತ್ತು. ಮಕ್ಕಳು ತಮ್ಮ ಓಟು ಹಾಕಲು ಹುಮ್ಮಸಿನಿಂದ ಶಾಂತವಾಗಿ ಬರುತ್ತಿದ್ದ ದೃಶ್ಯ ಮತ್ತು ಮತಗಟ್ಟೆಯಲ್ಲಿ ಮತ ಹಾಕಲು ವೋಟಿಂಗ್ ಮಷಿನ್ ಬಟನ್ ಒತ್ತುತ್ತಿದಾಗ ಬರುತ್ತಿದ್ದ ಬೀಪ್ ಸೌಂಡ್ ಸಾರ್ವತ್ರಿಕ ಚುನಾವಣೆಯೇ ನಡೆಯುತ್ತಿದೆ ಎಂಬ ವಾತವರಣವನ್ನು ಸೃಷ್ಟಿಸಿತ್ತು. ಚುನಾವಣೆಯಲ್ಲಿ ಓಂತ್ರಡ್ಕ ಮಕ್ಕಳ ಪಕ್ಷ ಮತ್ತು ಮಕ್ಕಳ ಪ್ರಜಾಪ್ರಭುತ್ವ ಪಕ್ಷ ಎಂಬ ಎರಡು ಪಕ್ಷಗಳ ಅಡಿಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಮತದಾನ ಮುಗಿಯುತ್ತಿದ್ದಂತೆಯೇ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ವೋಟಿಂಗ್ ಮಷಿನ್‍ನ ರಿಸಲ್ಟ್ ಬಟನ್ ಒತ್ತುವುದರ ಮೂಲಕ ಅಭ್ಯರ್ಥಿಗಳು ಪಡೆದ ಮತಗಳನ್ನು ತೋರಿಸಲಾಯಿತು. ಓಂತ್ರಡ್ಕ ಮಕ್ಕಳ ಪಕ್ಷದ ಎಲ್ಲಾ ಹತ್ತು ಅಭ್ಯರ್ಥಿಗಳು ಹೆಚ್ಚಿನ ಮತವನ್ನು ಪಡೆದು ಬಹುಮತದೊಂದಿಗೆ ಶಾಲಾ ಮಕ್ಕಳ ಸರಕಾರದ ಚುಕ್ಕಾಣಿ ಹಿಡಿದರು. ಓಂತ್ರಡ್ಕ ಮಕ್ಕಳ ಪಕ್ಷದ ನಾಯಕ ಚಂದ್ರಶೇಖರ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಗಣೇಶ ಉಪ ಮುಖ್ಯಮಂತ್ರಿಯಾಗಿ, ರಮ್ಯ ಶಿಕ್ಷಣ ಮಂತ್ರಿಯಾಗಿ, ರಶ್ಮಿ ಸ್ವಚ್ಚತಾ ಮಂತ್ರಿಯಾಗಿ, ಸುಹಾಶ್ರೀ ಗೃಹ ಮಂತ್ರಿಯಾಗಿ, ಜ್ಯೋತಿ ಸಾಂಸ್ಕೃತಿಕ ಮಂತ್ರಿಯಾಗಿ, ಕಿಶನ್ ಕೃಷಿ ಮಂತ್ರಿಯಾಗಿ, ಸುಧಾಕರ ನೀರಾವರಿ ಮಂತ್ರಿಯಾಗಿ, ಮನ್ವಿತ್ ಆರೋಗ್ಯ ಮಂತ್ರಿಯಾಗಿ, ಭಾವಿಕ ಕ್ರೀಡಾ ಮಂತ್ರಿಯಾಗಿ ಆಯ್ಕೆಯಾದರು. ಮಕ್ಕಳ ಪ್ರಜಾಪ್ರಭುತ್ವ ಪಕ್ಷದ ರೂಪಿಕ ಪಿ.ಎನ್ ಇವರು ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾದರು. ಈ ಶಾಲಾ ಸಂಸತ್ ಅಧಿವೇಶನವು ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯಲಿದ್ದು, ಸರಿಯಾಗಿ ತಮ್ಮ ಹುದ್ದೆ ನಿಭಾಯಿಸದ ಸಚಿವರನ್ನು ಅಧಿವೇಶನಲ್ಲಿ ವಜಾ ಮಾಡಲು ಅವಕಾಶವಿದೆ. ಮಂತ್ರಿ ಮಂಡಲದ ಅವಧಿ ಮುಗಿಯುತ್ತಿದ್ದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮಂತ್ರಿಗಳಿಗೆ ಸೂಕ್ತ ಬಹುಮಾನವನ್ನು ಸಹ ನಿಡಲಾಗುತ್ತದೆ.

Also Read  ಸುಳ್ಯ: ವಿಖಾಯ ತರಬೇತಿಗೆ ತಹಶೀಲ್ದಾರ್ ಅನಿತಾ ಲಕ್ಷ್ಮೀ ಭೇಟಿ

ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಶಾಲಾ ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಿಕ್ಕ ವಯಸ್ಸಿನಿಂದಲ್ಲೇ ಮಕ್ಕಳಲ್ಲಿ ಮತದಾನ ಹೇಗೆ ನಡೆಯುತ್ತದೆ? ಎಂಬುದರ ಅರಿವನ್ನು ಎಳೆಯ ವಯಸ್ಸಿನಲ್ಲಿಯೇ ಗಟ್ಟಿ ಮಾಡಿದರೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಈ ದಿಸೆಯಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಈ ಬಾರಿ ವೋಟಿಂಗ್ ಮಷಿನ್ ಬಳಸಿರುವುದು ವಿಶೇಷವಾಗಿದೆ’ ಎಂದರು. ಶಾಲೆಯ ಎಂಟನೆಯ ತರಗತಿಯ ವಿದ್ಯಾರ್ಥಿನಿ ರೂಪಿಕ ಪಿ.ಎನ್, “ ಚುನಾವಣಾ ಸಂದರ್ಭದಲ್ಲಿ ನಾನು ಪೋಷಕರ ಜೊತೆ ಮತಗಟ್ಟೆಗೆ ಹೋಗುತ್ತಿದ್ದೆ. ಆದರೆ ಅಲ್ಲಿ ಚುನಾವಣೆ ಹೇಗೆ ನಡೆಯುತ್ತಿದೆ. ವೋಟಿಂಗ್ ಮಷಿನ್ ಹೇಗೆ ಕಾರ್ಯ ನಿರ್ವಹಿಸುತ್ತದೆ. ಮತ ಎಣಿಕೆ ಹೇಗೆ ಮಾಡುತ್ತಾರೆ ಎನ್ನುವುದು ತಿಳಿದಿರಲಿಲ್ಲ. ನಮ್ಮ ಶಾಲೆಯ ಮಾದರಿ ಚುನಾವಣೆಯಿಂದ ನಮಗೆಲ್ಲ ಚುನಾವಣೆಯ ನಿಖರ ಮಾಹಿತಿ ಸಿಕ್ಕಿದೆ. ಆದಷ್ಟು ಬೇಗೆ ಸಾರ್ವತ್ರಿಕ ಚುನಾವನೆಯಲ್ಲಿ ಮತ ಚಲಾಯಿಸಲು ಉತ್ಸುಕನಾಗಿದ್ದೇನೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚುನಾವಣಾ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಷಯಗಳನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ಈ ಪ್ರಯತ್ನವನ್ನು ನಾವು ಮಾಡಿದ್ದೇವೆ. ಭವಿಷ್ಯದ ಭಾವಿ ಮತದಾರರನ್ನು ತಯಾರಿ ಮಾಡಬೇಕಾದ ದೊಡ್ಡ ಹೊಣೆ ಶಿಕ್ಷಕರ ಮೇಲಿದೆ ಎಂದು ಚುನಾವಣಾ ಆಯೋಜಕ ಶಿಕ್ಷಕ ದಿಲೀಪ್ ಕುಮಾರ್ ಎಸ್ ಅಭಿಪ್ರಾಯಪಟ್ಟರು. ಒಟ್ಟಾರೆಯಾಗಿ ಓಂತ್ರಡ್ಕ ಶಾಲಾ ಸಂಸತ್ತಿನ ಚುನಾವಣೆಯು ಪೋಷಕರಲ್ಲಿ ಮತ್ತು ಸಮುದಾಯಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ.

Also Read  ಲಿಕ್ಕರ್ ಬಾಕ್ಸ್ ನಾಪತ್ತೆ ➤ ಐವರು ಅಬಕಾರಿ ಸಿಬ್ಬಂದಿ ಅಮಾನತು!

error: Content is protected !!
Scroll to Top