(ನ್ಯೂಸ್ ಕಡಬ) newskadaba.com ಮಂಗಳೂರು, ನ. 29. ಇಲ್ಲಿನ ನರ್ಸಿಂಗ್ ಕಾಲೇಜೊಂದರ ಕೇರಳ ಮೂಲದ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ಗಡ್ಡ ಬೋಳಿಸಿ ಹಣ ನೀಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತರಲ್ಲಿ 7 ಮಂದಿ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇದರ ಪೈಕಿ ಓರ್ವ ರ್ಯಾಗಿಂಗ್ ಒಳಪಟ್ಟ ವಿದ್ಯಾರ್ಥಿಯಾಗಿದ್ದು, ಏಳು ಮಂದಿ ಬಲ್ಮಠದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಅತ್ತಾವರದಿಂದ ಫಲ್ನೀರ್ ನಲ್ಲಿನ ಅಪಾರ್ಟ್ಮೆಂಟ್ ಒಂದಕ್ಕೆ ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬರುತ್ತಿದ್ದ ಆರೋಪಿಗಳು ವಿದ್ಯಾರ್ಥಿಗಳನ್ನು ಬಲವಂತವಾಗಿ ರೂಮಿಗೆ ಕರೆದುಕೊಂಡು ಹಾಡಿಸಿ, ಗಡ್ಡ ಬೋಳಿಸಿದ್ದಲ್ಲದೇ ಹಣ ನೀಡುವಂತೆ ಒತ್ತಾಯಿಸಿ, ನೀಡದಿದ್ದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ 270ರೂ. ವರ್ಗಾಯಿಸಿ ಹೆಲ್ಮೆಟ್ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದರು.