(ನ್ಯೂಸ್ ಕಡಬ) newskadaba.com ಮೈಸೂರು, ನ. 27. ಹೊಸ ರೂಪಾಂತರಿ ಕೊರೋನಾ ತಳಿ ಆತಂಕ ಸೃಷ್ಟಿಸಿದ ಹಿನ್ನೆಲೆ ಕೇರಳ ಮತ್ತು ಕರ್ನಾಟಕ ಗಡಿಭಾಗದಲ್ಲಿ ಆರೋಗ್ಯಾಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಭಾರತಕ್ಕೆ ಕೋವಿಡ್ ಹೊಸ ತಳಿಯ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೊರೋ ವೈರಸ್ ಬಗ್ಗೆ ಈಗಾಗಲೇ ತರಬೇತಿ ನೀಡಲಾಗುತ್ತಿದ್ದು, ನೂರೋ ವೈರಸ್‌ನಿಂದ ವಾಂತಿ, ಭೇದಿ, ಕಾಣಿಸಿಕೊಳ್ಳುವ ಭೀತಿಯಿಂದಾಗಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನಿರ್ಲಕ್ಷ್ಯ ವಹಿಸದೇ ತಪಾಸಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕೊರೊನಾ ಬಂದಾಗಿನಿಂದ ಜನರ ಬದುಕು ನಿರ್ವಹಣೆ ಕಷ್ಟವಾಗಿದ್ದು, ಒಂದು ಮತ್ತು ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್‌ಡೌನ್ ಮಾಡಿದ ಪರಿಣಾಮ ಜನರು ಸಂಕಷ್ಟಕ್ಕೀಡಾಗಿದ್ದರು. ಒಂದು ವೇಳೆ ಮೂರನೇ ಅಲೆಯ ಪರಿಣಾಮ ಲಾಕ್‌ಡೌನ್‌ನಂತಹ ಪರಿಸ್ಥಿತಿ ಎದುರಾದರೆ ಬದುಕು ಮೂರಾಬಟ್ಟೆ ಆಗಲಿದ್ದು, ಇದರಿಂದಾಗಿ ಸರ್ಕಾರ ನಿರ್ಲಕ್ಷ್ಯ ವಹಿಸದೇ ಈಗಿಂದಲೇ ಅಗತ್ಯ ಕ್ರಮಗಳನ್ನ ಜರುಗಿಸಬೇಕಾಗಿದೆ. ಚೆಕ್‌ಪೋಸ್ಟ್ ಗಳಲ್ಲಿ ಹೆಚ್ಚು ನಿಗಾ ವಹಿಸಲಾಗುತ್ತಿದ್ದು, ನಿರ್ಲಕ್ಷ್ಯ ವಹಿಸದಂತೆಯೂ ಎಚ್ಚರಿಕೆ ನೀಡಲಾಗಿದೆ.
ಸದ್ಯ ಎಲ್ಲೆಡೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು, ಕೆಲವರು ವ್ಯಾಕ್ಸಿನೇಷನ್ ಪಡೆಯದೆ ಹಾಗೇಯೇ ನಿರ್ಲಕ್ಷ್ಯ ವಹಿಸಿದ್ದಾರೆ. ಅಂಥವರನ್ನ ಗುರುತಿಸಿ ಲಸಿಕೆ ನೀಡಬೇಕಾಗುತ್ತದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದೆನ್ನಲಾಗಿದೆ.