ನಾಳೆ‌ ಬಿ.ಸಿ.ರೋಡ್ ನಲ್ಲಿ ಉಚಿತ ಹಿಜಾಮ ಚಿಕಿತ್ಸಾ ಶಿಬಿರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.04. ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಹಾಗೂ ಯು.ಟಿ.ಖಾದರ್ ಅಭಿಮಾನಿಗಳ ಬಳಗ ಮಂಗಳೂರು ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ನ.05 ಭಾನುವಾರದಂದು ಉಚಿತ ಹಿಜಾಮ ಚಿಕಿತ್ಸಾ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.

ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯು.ಟಿ.ಖಾದರ್ ಅಭಿಮಾನಿಗಳ ಬಳಗ ಅಧ್ಯಕ್ಷ ಆಶಿಕ್ ಕುಕ್ಕಾಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರದಂದು ತಿಳಿಸಿದ್ದಾರೆ.


ಮಿತ್ತಬೈಲು ಜುಮಾ ಮಸೀದಿ ಖತೀಬರಾದ ಎಂ.ವೈ. ಅಶ್ರಫ್ ಫೈಝಿ ದುವಾ ನೆರವೇರಿಸಲಿದ್ದಾರೆ. ವೆನ್ಲಾಕ್ ಜಿಲ್ಲಾಸ್ಪತ್ರೆಯ ಯುನಾನಿ ವೈದ್ಯರಾದ ಡಾ. ಸಯ್ಯದ್ ಝಾಹಿದ್ ಹುಸೈನ್ ಹಿಜಾಮ ಕ್ಯಾಂಪ್ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೇರು ಅಭಿವೃಧ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್. ಖಾದರ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಬಿ.ಎ. ಮಹಮ್ಮದಾಲಿ ಕಮ್ಮರಡಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾದ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಬಂಟ್ವಾಳ ಪುರಸಭೆ ಅಧ್ಯಕ್ಷರಾದ ರಾಮಕೃಷ್ಣ ಆಳ್ವ, ಉಪಾಧ್ಯಕ್ಷರಾದ ಮಹಮ್ಮದ್ ನಂದರಬೆಟ್ಟು, ಬೂಡಾ ಅಧ್ಯಕ್ಷರಾದ ಸದಾಶಿವ ಬಂಗೇರ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಇದೇ ವೇಳೆ ಕೊಡಂಗೆ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಮತ್ತು ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

Also Read  ಕಲ್ಲಡ್ಕ: ಚೂರಿ ಇರಿತ ಪ್ರಕರಣದ ಆರೋಪಿ ಪೊಲೀಸ್ ವಶಕ್ಕೆ

ಸುದ್ದಿಗೋಷ್ಠಿಯಲ್ಲಿ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಅಧ್ಯಕ್ಷ ರಿಯಾಝ್ ಜವಾನ್, ಸದಸ್ಯರಾದ ಸತ್ತಾರ್ ನಂದರಬೆಟ್ಟು, ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ, ಯೂನುಸ್ ನೌಫಲ್ ಬಂಟ್ವಾಳ ಉಪಸ್ಥಿತರಿದ್ದರು.

error: Content is protected !!
Scroll to Top