ನಾಪತ್ತೆಯಾದ ಫೋಟೋಗ್ರಾಫರ್ ಕೊಲೆಯಾಗಿ ಪತ್ತೆ ➤ ಆಸ್ತಿ ಆಸೆಗೆ ಅಳಿಯನನ್ನೇ ಕೊಲೆಗೈದು ಕಾಡಿನಲ್ಲಿ ಹೂತು ಹಾಕಿದ ಮಾವ..! ➤➤ ನಾಲ್ವರ ಅರೆಸ್ಟ್

(ನ್ಯೂಸ್ ಕಡಬ) Newskadaba.com ಪುತ್ತೂರು, ನ. 25. ಮೈಸೂರಿನಲ್ಲಿ ಫೋಟೋಗ್ರಾಫರ್ ಆಗಿದ್ದ ಮಂಗಳೂರು ಮೂಲದ ನಿವಾಸಿ ಜಗದೀಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.


ಬಂಧಿತ ಆರೋಪಿಗಳನ್ನು ಜಗದೀಶ್ ಅವರ ಮಾವ ಪಟ್ಲಡ್ಕ ಬಾಲಕೃಷ್ಣ ರೈ, ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ ಮತ್ತು ಪಕ್ಕದ ಮನೆಯ ನಿವಾಸಿ ಜೀವನ್ ಪ್ರಸಾದ್ ಎಂದು ಗುರುತಿಸಲಾಗಿದೆ. ಜಗದೀಶ್ ಎಂಬವರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೈದು, ಬಳಿಕ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಸಮೀಪದ ಮುಗುಳಿ ಎಂಬಲ್ಲಿನ ಸರಕಾರಿ ರಕ್ಷಿತಾರಣ್ಯದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದು, ಪೋಲಿಸರ ತನಿಖೆಯಲ್ಲಿ ಬಯಲಾಗಿತ್ತು. ಮೂಲತಃ ಮಂಗಳೂರು ನಿವಾಸಿಯಾಗಿರುವ ಜಗದೀಶ್ ಮೈಸೂರಿನಲ್ಲಿ ಫೋಟೊಗ್ರಾಫರ್ ಆಗಿದ್ದು, 3 ವರ್ಷಗಳ ಹಿಂದೆ ಕುಂಜೂರು ಪಂಜದಲ್ಲಿ ಸುಮಾರು 2 ಎಕರೆ ಜಮೀನು ಖರೀದಿಸಿದ್ದರು. ಇದನ್ನು ನೋಡಿಕೊಳ್ಳಲೆಂದು ತನ್ನ ಮಾವನನ್ನು ನಿಯೋಜಿಸಿದ್ದರು.‌ ಅಲ್ಲದೇ ಆಗಾಗ ಇಲ್ಲಿಗೆ ಆಗಮಿಸಿ ಕೃಷಿಯನ್ನು ನೋಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಕಳೆದ ನ.18 ರಂದು ಜಮೀನು ನೋಡಿ ಹೋಗಲೆಂದು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ್ದು, ಆದರೆ ವಾಪಾಸ್ ಹಿಂತಿರುಗಲಿಲ್ಲ. ಈ ಬಗ್ಗೆ ಜಗದೀಶ್‌ ಪತ್ನಿ ಮಂಗಳೂರಿನಲ್ಲಿ ವಾಸ್ತವ್ಯವಿದ್ದ ಜಗದೀಶ್‌ ಸಹೋದರ ಶಶಿಧರ್ ಅವರಿಗೆ ತಿಳಿಸಿ ಬಳಿಕ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಜಗದೀಶ್‌ ಅವರ ನಾಪತ್ತೆಗೆ ಸಂಬಂಧಿಸಿ ಶಶಿಧರ್ ಎಂಬವರು ತಮ್ಮ ಮಾವ ಮತ್ತು ಅವರ ಪುತ್ರನ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಪೊಲೀಸರು ಇದೇ ಅನುಮಾನದೊಂದಿಗೆ ಪ್ರಕರಣದ ತನಿಖೆ ನಡೆಸಿದಾಗ ಜಗದೀಶ್ ಅವರ ಕೊಲೆ ನಡೆಸಿದ ವೃತ್ತಾಂತ ಬಯಲಾಗಿದೆ. ಆರೋಪಿಗಳಾದ ಮಾವ ಬಾಲಕೃಷ್ಣ ರೈ ಕಾರಿನಲ್ಲೇ ಸುತ್ತಿಗೆಯಿಂದ ಜಗದೀಶ್ ಅವರ ತಲೆಗೆ ಹೊಡೆದು ಕೊಲೆ ಮಾಡಿ, ಬಳಿಕ ಆತನ ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ ಮತ್ತು ಪಕ್ಕದಮನೆ ನಿವಾಸಿ ಜೀವನ್ ಪ್ರಸಾದ್ ಅವರು ಮೃತದೇಹವನ್ನು ಹೂತು ಹಾಕಲು ಸಹಕರಿಸಿದ್ದು, ಅದನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಪಚ್ಚನಾಡಿ ಬೆಂಕಿ ಅವಘಡ- ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ➤ ನವೀನ್ ಆರ್ ಡಿಸೋಜಾ

 

 

error: Content is protected !!
Scroll to Top