(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 25. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉತ್ತಿಷ್ಠ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಬೆಂಗಳೂರು, ಇದರ ವತಿಯಿಂದ ಕಿಂಚಿತ್ತು ಸಾಹಿತ್ಯ ಹಾಗೂ ಇತರ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ಉದಯೋನ್ಮುಖರಿಗೆ, ಯುವ ಪ್ರತಿಭೆಗಳಿಗೆ ಕೊಡಮಾಡುವ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ರಾಜ್ಯೋತ್ಸವ ಸಂಭ್ರಮಾಚರಣೆ ನಕ್ಷತ್ರ ಹಾಲ್, ಅಂಬರ್ ಎಲಿಗೆನ್ಸ್ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕವಯಿತ್ರಿ, ನಿರೂಪಕಿ, ನೃತ್ಯಗಾರ್ತಿ, ಹಾಡುಗಾರ್ತಿ, ಬಹುಮುಖ ಪ್ರತಿಭೆ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಉತ್ತಿಷ್ಠ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ನ ಸಂಸ್ಥಾಪಕಾಧ್ಯಕ್ಷರು ಶ್ರೀಮತಿ ಸುಜಾತ ಎಂ.ಹಾಗೂ ಗೌರವಾಧ್ಯಕ್ಷರು ಶ್ರೀ ನರಸಿಂಹ ಮೂರ್ತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆ ಮಾತಾದವರು. ಕವಿಗೋಷ್ಠಿಗಳಲ್ಲಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 300 ಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು. ಲೇಖಕಿಯಾಗಿ, ಬರಹಗಾರ್ತಿಯಾಗಿ, ನೃತ್ಯಪಟುವಾಗಿ, ನಿರೂಪಕಿಯಾಗಿಯೂ ಮಿಂಚಿದ್ದರು.