(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 23. ಕಾರಿನ ಮೇಲೆ ನಾಯಿ ಮೂತ್ರ ಮಾಡಿದ್ದರಿಂದ ಆಕ್ರೋಶಗೊಂಡ ಕಾರು ಮಾಲಕ ನಾಯಿ ಮಾಲೀಕನ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಹೆಚ್ಎಎಲ್ ನಿವೃತ್ತ ಉದ್ಯೋಗಿ ಗೇರಿ ರೋಜಾರಿಯೊ ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಕಾರು ಮಾಲಿಕ ಚಾರ್ಲ್ಸ್ ನಾಪತ್ತೆಯಾಗಿದ್ದು, ಗೇರಿ ರೊಜಾರಿಯೋ ನೀಡಿದ ದೂರಿನಂತೆ ಕಾರು ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೇರಿ ರೋಜಾರಿಯೋ ತಮ್ಮ ನಾಯಿಯನ್ನು ರಾತ್ರಿ 11 ಗಂಟೆಗೆ ಹೊರಗಡೆ ಬಿಟ್ಟಿದ್ದು, ಈ ವೇಳೆ ನಾಯಿಯು ಎದುರುಗಡೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ಎನ್ನಲಾಗಿದೆ. ಈ ವಿಚಾರವಾಗಿ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಎರಡನೇ ಮಹಡಿಯಲ್ಲಿ ನಿಂತು, ಅಲ್ಲಿಂದಲೇ ಕಲ್ಲು ತೆಗೆದು ಬಿಸಾಡಿದ್ದು, ವೃದ್ಧ ಗೇರಿ ರೋಜಾರಿಯೋ ಮುಖಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ. ಕಲ್ಲು ಬಿದ್ದ ರಭಸಕ್ಕೆ ರೋಜಾರಿಯೊ ಬಾಯಿಂದ ಎರಡು ಹಲ್ಲುಗಳು ಉದುರಿದೆ. ಈ ಕುರಿತು ಬಾಣಸವಾಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.