ಕಾರಂತನ ವಿರುದ್ದ ಕಾನೂನು ಕ್ರಮಕ್ಕೆ ಎಸ್ಡಿಪಿಐ ಆಗ್ರಹ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 23. ನವೆಂಬರ್ 21 ರಂದು ಬಂಟ್ವಾಳ ತಾಲೂಕಿನ ಕಾರಿಂಜೆ ದೇವಸ್ಥಾನದ ರಥಬೀದಿಯಲ್ಲಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ರುದ್ರಗಿರಿಯ ರಣಕಹಳೆ ಎಂಬ ಸಭೆಯಲ್ಲಿ, ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾದ ಜಗದೀಶ ಕಾರಂತನು ತನ್ನ ಭಾಷಣದುದ್ದಕ್ಕೂ ದಕ್ಷಿಣ ಕನ್ನಡದ ಗೌರವಾನ್ವಿತ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಪೋಲಿಸ್ ಅಧಿಕಾರಿಗಳ ವಿರುದ್ಧ ಅಸಹ್ಯವೆನಿಸುವ ರೀತಿಯಲ್ಲಿ ಕೊರಳು ಪಟ್ಟಿ ಹಿಡಿದು ಎಳೆದುತರುತ್ತೇವೆ ಮತ್ತು ಪೋಲೀಸ್ ಅಧಿಕಾರಿಗಳನ್ನು ಬೆತ್ತಲುಗೊಳಿಸುತ್ತೇವೆ ಎನ್ನುವಂತಹ ಕಾನೂನು ಬಾಹಿರ ಹೇಳಿಕೆ ಮತ್ತು ಸಾರ್ವಜನಿಕವಾಗಿ ಅಧಿಕಾರಿಗಳನ್ನು ನಿಂದಿಸುವಂತಹ ಕೃತ್ಯಗಳಲ್ಲಿ ತೊಡಗಿದ್ದಾನೆ. ಜಿಲ್ಲೆಯಲ್ಲಿ ಘನತೆ ಗೌರವವಿರುವ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸಿರುವುದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ತಿಳಿಸಿದ್ದಾರೆ.

Also Read  ಕಡಬ: ಕಡವೆಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ➤ ಗಾಯಗೊಂಡ ಕಡವೆ ಪಿಲಿಕುಳಕ್ಕೆ ವರ್ಗಾವಣೆ


ಸಭೆ ನಡೆದು ಒಂದು ದಿನ ಕಳೆದರೂ, ಪೋಲಿಸ್ ಇಲಾಖೆ ಇನ್ನೂ ಕೂಡ ಪ್ರಕರಣ ದಾಖಲಿಸಲು ಮೀನಾ ಮೇಷ ಎಣಿಸುತ್ತಿರುವುದು ಸಮಾಜದಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಬುದ್ಧಿವಂತರ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಇಂಥಹ ಸ್ಥಿತಿಯಾದರೆ ಇನ್ನು ಜನ ಸಾಮಾನ್ಯರಲ್ಲಿ ಅರಾಜಕತೆ ಮತ್ತು ಭಯದ ವಾತಾವರಣ ಉಂಟಾಗಲಿದೆ. ಆದ್ದರಿಂದ ಈ ಕೂಡಲೆ ಕಾರ್ಯಕ್ರಮದ ಆಯೋಜಕರು ಹಾಗೂ ಭಾಷಣಕಾರರ ವಿರುದ್ದ ಕಾನೂನು ಕ್ರಮ ಜರಗಿಸಬೇಕೆಂದು ಎಸ್ಡಿಪಿಐ ಆಗ್ರಹಿಸುತ್ತಿದೆ.

 

error: Content is protected !!
Scroll to Top