(ನ್ಯೂಸ್ ಕಡಬ) newskadaba.com ಕಡಬ, ನ. 23. ತಾಲೂಕಿನ ಪೆರಾಬೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಮೂವರು ಆರೊಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ರು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ತುಳಸಿ, ಚಂದ್ರಶೇಖರ್ ಮತ್ತು ಅಶೋಕ ಎಂಬವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಎಸ್ಟಿ ಹಾಗೂ ಎಸ್ಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲೆಂದು ಪೆರಾಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಯ್ದಿರಿಸಿದ್ದ 0.70 ಎಕ್ರೆ ಸರಕಾರಿ ಜಮೀನಿಗೆ ಅಕ್ಟೋಬರ್ 10ರಂದು ರಕ್ಷಣಾ ಬೇಲಿ ಹಾಕಲಾಗಿದ್ದು, ಪ್ರಸ್ತುತ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿ ಬೇಲಿಯನ್ನು ದ್ವಂಸಗೈದು ಪಂ. ಸ್ವತ್ತು ನಾಶ ಮಾಡಿ ಪಂಚಾಯತ್ ಗೆ ಸುಮಾರು 50,000 ರೂ. ನಷ್ಟ ಉಂಟು ಮಾಡಿದ್ದಾರೆ. ಪಂಚಾಯತ್ ಗೆ ಬಂದ ಮಾಹಿತಿ ಪ್ರಕಾರ ಸ್ಥಳ ಪರಿಶೀಲನೆಗೆ ಹೋದವರಿಗೆ ರೈತ ಸಂಘಟನೆಯವರ ಮೂಲಕ ಬೆದರಿಕೆ ಒಡ್ಡಿದ್ದಾರೆ ಹಾಗೂ ನ.04 ರಂದು ಹನ್ನೊಂದು ಗಂಟೆಯ ವೇಳೆಗೆ ಪಂಚಾಯತ್ ಮುಂದೆ ಅನಧಿಕೃತವಾಗಿ ಆರೋಪಿಗಳು ಗುಂಪು ಸೇರಿದ್ದರು. ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೆರಾಬೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಕಡಬ ಠಾಣೆಗೆ ದೂರು ನೀಡಿದ್ದು, ಇದರಂತೆ ಕೆಪಿಡಿಎಲ್ ಪಿ ಆಕ್ಟ್ 1981ರ ಅಡಿಯಲ್ಲಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳು ತಮ್ಮ ಪರ ವಕೀಲ ಮಹೇಶ್ ಕಜೆಯವರ ಮೂಲಕ ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.