ಮೋದಿಯವರು ಕೃಷಿ ಕಾಯ್ದೆಯನ್ನು ಮತ್ತೆ ಜಾರಿಗೆ ತರಲಿದ್ದಾರೆ ➤ ಕಲ್ಲಡ್ಕ ಪ್ರಭಾಕರ ಭಟ್

(ನ್ಯೂಸ್ ಕಡಬ) newskadbaa.com ಉಡುಪಿ, ನ. 22. ಕೃಷಿ ಕಾಯ್ದೆಯನ್ನು ವಿಪಕ್ಷಗಳು ವಿರೋಧಿಸಿದ್ದರಿಂದ ಸಮಸ್ಯೆ ಆಯ್ತು. ಹಾಗಂತ, ಮೋದಿ ಇದನ್ನು ಹಾಗೆಯೇ ಬಿಡೋದಿಲ್ಲ, ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ. ‌

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆಯ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸಲಾಗಲಿಲ್ಲ. ಹಾಗಾಗಿ ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಉತ್ತಮ ನಿರ್ಧಾರ. ಎರಡು ಮಾತಿಲ್ಲ ಎಂದು ಹೇಳಿದರು. ವಿರೋಧ ಪಕ್ಷಗಳು, ಪ್ರತಿಭಟನೆ ನಡೆಸುತ್ತಿದ್ದವರು ಈ ಬಗ್ಗೆ ಚರ್ಚೆ ನಡೆಸುವುದಕ್ಕೂ ಸಿದ್ಧರಿರಲಿಲ್ಲ. ಕುಳಿತುಕೊಳ್ಳದೇ ಚರ್ಚೆ ಆಗುತ್ತದೆಯೇ? ಚರ್ಚೆ ಆದಾಗ ಎಲ್ಲಾ ಕಡೆಯಿಂದ ಉತ್ತಮ ವಿಚಾರಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಮೋದಿಯವರು ತಿದ್ದುಪಡಿ ಮಾಡುವುದಕ್ಕೆ ಒಪ್ಪಿಕೊಂಡಿದ್ದರಾದರೂ ಇವರು ಯಾವುದಕ್ಕೂ ಒಪ್ಪಲಿಲ್ಲ. ಪ್ರಧಾನಿಯವರು ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ ಎಂದರೆ ಎರಡು ಹೆಜ್ಜೆ ಮುಂದಿಟ್ಟಿದ್ದಾರೆ ಎಂದೇ ಅರ್ಥ. ಮುಂದಕ್ಕೆ ಬೇರೆ ರೂಪದಲ್ಲಿ ಈ ಕಾಯ್ದೆ ಜಾರಿಗೆ ಬರಲಿದೆ. ಈ ಕಾಯ್ದೆಯಿಂದಾಗಿ ನೈಜ ರೈತರಿಗೆ, ಸಣ್ಣ ಹಿಡುವಳಿದಾರರಿಗೆ ನಷ್ಟವಾಗಿದೆ. ಈ ವಿಚಾರ ಜನರಿಗೆ ತಲುಪುತ್ತದೆ. ತಲುಪಬೇಕು. ಅದಕ್ಕಾಗಿಯೇ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಭಾಕರ ಭಟ್ ಹೇಳಿದರು.

Also Read  ಮಂಗಳೂರು: 2 ಲಕ್ಷ ರೂ. ಸಾಲ ಪಡೆದು ನಾಪತ್ತೆಯಾದ ಯುವಕ ➤‌ ತಂದೆಯಿಂದ ದೂರು ದಾಖಲು

error: Content is protected !!
Scroll to Top