(ನ್ಯೂಸ್ ಕಡಬ) newskadaba.com ಕಡಬ, ನ. 19. ರಾಜ್ಯ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚ್ ಗಳ ಮತ್ತು ಸಂಘ ಸಂಸ್ಥೆಗಳ ಗಣತಿಯನ್ನು ವಿರೋಧಿಸಿ ಕಡಬ ಸಂಯುಕ್ತ ಕ್ರೈಸ್ತ ಎಕ್ಯುಮೆನಿಕ್ಕಲ್ ಸಂಘಟನೆಯು ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದೆ.
ಇದರ ಪ್ರಕಾರ, ಈಗಾಗಲೇ ನಮ್ಮ ಸಂವಿಧಾನವು ತನ್ನ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಪ್ರತಿಪಾದಿಸಲು ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ. ಹಾಗಿರುವಾಗ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಏನು, ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ, ಉಳಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿನ ಕ್ರೈಸ್ತ ಸಮುದಾಯದ ಚರ್ಚುಗಳ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದೆ , ಈ ಗಣತಿಯ ಉದ್ದೇಶವಾದರೂ ಏನು, ಸರಕಾರ ಗಣತಿ ಮಾಡಬೇಕೆಂದರೆ ಮಾಡಲಿ , ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ, ಆದರೆ ನಮ್ಮ ಸಮುದಾಯವನ್ನು ಮಾತ್ರ ಗುರಿಯಾಗಿರಿಸಿ ಗಣತಿಯನ್ನು ನಡೆಸಲು ಆದೇಶಿಸಿರುವುದು ಯಾಕೆ, ಅಲ್ಲದೆ ಚರ್ಚುಗಳ ವಿವರ ಈಗಾಗಲೇ ಸರಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ಯಾಕೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಭಾರತದ ಮೊದಲ ಜನಗಣತಿಯಿಂದ ಇಲ್ಲಿಯವರೆಗೆ ಸಹ ದೇಶದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆಯ ಅಂಕಿ ಅಂಶ ಕೇಂದ್ರ ಮತ್ತು ರಾಜ್ಯ ಸರಕಾರದ ಬಳಿ ಇದೆ, ಭಾರತದಲ್ಲಿ ದೊಡ್ಡ ಮಟ್ಟಿಗೆ ಮತಾಂತರ ನಡೆಯುತ್ತಿದೆ ಎಂದು ಆರೋಪಿಸುವವರು, ಈ ಅಂಕಿ ಅಂಶಗಳನ್ನು ಗಮನಿಸಿದರೆ ಎಲ್ಲರಿಗೂ ಸತ್ಯಾಂಶದ ಅರಿವಾಗುತ್ತದೆ. ಕ್ರೈಸ್ತ ಸಮುದಾಯವು ಸಾವಿರಾರು ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೂಲಕ ತನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ, ಇತಿಹಾಸದಲ್ಲಿ ಕ್ರೈಸ್ತ ಶಾಲಾ ಕಾಲೇಜುಗಳಲ್ಲಿ ಓದಿದವರು ಅಥಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಕ್ರೈಸ್ತರೇತರರು ಯಾರಾದರೂ ಒಬ್ಬರು ತನ್ನನ್ನು ಮತಾಂತರಗೊಳಿಸಲಾಗಿದೆ ಎಂದು ಸಾಬೀತುಪಡಿಸಲಿ, ಈ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಅದು ಯಾವ ಒಳಿತನ್ನು ಮಾಡುವುದಿಲ್ಲ, ಬದಲಿಗೆ ಆ ಕಾಯ್ದೆ ಕೋಮುವಾದಿಗಳ ಕೈಗೆ ಸಿಕ್ಕಿ ಅದನ್ನು ಅವರು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಉಪಯೋಗಿಸಬಹುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೆ.ಫಾ. ಝಖಾರಿಯಾಸ್ ಒ.ಐ.ಸಿ. ರೆ.ಫಾ. ವಿ.ಸಿ. ಮಾಣಿಕೋರ್‌ಎಪಿಸ್ಕೋಪ, ರೆ.ಫಾ. ಪಿ.ಕೆ. ಅಬ್ರಹಾಂ, ಫಾ. ಅರುಣ್ ವಿಲ್ಸನ್ ಲೋಬೋ, ಮ್ಯಾತ್ಯೂ ಅಬ್ರಹಾಂ, ಎ. ಸ್ಟೀಪನ್, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಮಾಜಿ ಸದಸ್ಯೆ ವಲ್ಸಮ್ಮ ಕೆ.ಟಿ ಮೊದಲಾದವರು ಉಪಸ್ಥಿತರಿದ್ದರು.