ಉಪ ಅಂಚೆ ಪಾಲಕರಿಂದ ಸಾವಿರಾರು ರೂ. ವಂಚನೆ ➤ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 18. ತಾಲೂಕಿನ ಮಂಚಿ ಅಂಚೆ ಕಚೇರಿಯಲ್ಲಿ ಉಪ ಅಂಚೆ ಪಾಲಕರಾಗಿದ್ದ ವೃಶಬೇಂದ್ರ ಹೆಬ್ಬಾರ್ ಅವರು ಅಂಚೆ ಕಚೇರಿಯ ವ್ಯವಹಾರಕ್ಕೆಂದು ಹಣ ತೆಗೆದು ಕಚೇರಿಯ ಬ್ರಾಂಚ್ ಗೆ ಕಳುಹಿಸದೇ ತನ್ನ ಸ್ವಂತಕ್ಕೆ ಬಳಸಿಕೊಂಡು ಅಂಚೆ ಕಚೇರಿಗೆ ವಂಚಿಸಿದ ಬಗ್ಗೆ ಜೋಡುಮಾರ್ಗ ಸಹಾಯಕ ಅಂಚೆ ಕಚೇರಿಯ ಮುಖ್ಯಸ್ಥ ಲೋಕನಾಥ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃಶಬೇಂದ್ರ ಅವರು ಮಂಚಿ ಉಪಅಂಚೆ ಕಛೇರಿಯಲ್ಲಿ 2014 ರ ಎಪ್ರಿಲ್ 28ರಿಂದ 2018ರ ಸೆಪ್ಟೆಂಬರ್ 10ರವರೆಗೆ ಉಪ ಅಂಚೆ ಪಾಲಕರಾಗಿ ಕರ್ತವ್ಯದಲ್ಲಿದ್ದು, ಇದರ ಅಧೀನಕ್ಕೆ ಬರುತ್ತಿದ್ದ ಇರಾ ಶಾಖೆ, ಸಾಲೆತ್ತೂರು ಶಾಖೆ ಹಾಗೂ ಕುಲಾಲ್ ಶಾಖೆಯ ಅಂಚೆ ಕಛೇರಿಗೆಂದು ಕ್ರಮವಾಗಿ 2018ರ ಸೆಪ್ಟೆಂಬರ್ 5 ರಂದು ಇರಾ ಶಾಖೆ ಕಚೇರಿಗೆ 30 ಸಾವಿರ, ಸೆ. 7 ರಂದು ಸಾಲೆತ್ತೂರು ಶಾಖೆ ಕಚೇರಿಗೆ 20 ಸಾವಿರ ಹಾಗೂ ಸೆ. 10 ರಂದು ಕುಳಾಲು ಶಾಖಾ ಅಂಚೆ ಕಚೇರಿಗೆ 30 ಸಾವಿರ ರೂಪಾಯಿ ನಗದು ಹಣವನ್ನು ಕಚೇರಿಯ ದೈನಂದಿನ ವ್ಯವಹಾರಕ್ಕೆಂದು ಕಳುಹಿಸಿದ ಹಾಗೆ ಇಲಾಖಾ ಲೆಕ್ಕದಲ್ಲಿ ತೋರಿಸಿ ಆಯಾ ಬ್ರಾಂಚ್ ನ ಅಂಚೆ ಕಛೇರಿಗಳಿಗೆ ಕಳುಹಿಸದೆ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ಒಟ್ಟು 80 ಸಾವಿರ ರೂಪಾಯಿ ಹಣವನ್ನು ಅಂಚೆ ಇಲಾಖೆಗೆ ವಂಚಿಸಿರುವುದಾಗಿ ಲೋಕನಾಥ ಅವರು ಠಾಣೆಗೆ ನೀಡಿದ ದೂರಿನಂತೆ ಅಪರಾಧ ಕ್ರಮ ಸಂಖ್ಯೆ 147/2021 ಕಲಂ 409, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Also Read  ಬೈಕ್ ಗಳ ನಡುವೆ ಢಿಕ್ಕಿ ➤ ಓರ್ವ ಮೃತ್ಯು

error: Content is protected !!
Scroll to Top