ನೆಲ್ಯಾಡಿ: ಕಣ್ಣೀರಾದ ಕುಡಿಯುವ ನೀರು..! ➤ ಮನವಿಗೆ ಕ್ಯಾರೇ ಅನ್ನದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ನ. 08. ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇರ್ನಡ್ಕ ಎಂಬಲ್ಲಿ ಪಂಚಾಯತ್ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿ ಮೂರು ವರ್ಷಗಳೇ ಸಂಧಿವೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರು ಗ್ರಾಮ ಪಂಚಾಯತ್, ಪುತ್ತೂರು ಉಪ ಆಯುಕ್ತರು, ಪುತ್ತೂರು ಇ.ಓ ಸೇರಿದಂತೆ ಸಾಮಾನ್ಯವಾಗಿ ಎಲ್ಲಾ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೂ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಂದ ಹಾಗೆ ಇಲ್ಲಿ ಕೊಳವೆ ಬಾವಿಯಲ್ಲಿ ನೀರಿಲ್ಲ ಅಥವಾ ನೀರು ಸರಬರಾಜು ಮಾಡುವ ಪೈಪ್‌ಲೈನ್ ಇಲ್ಲ,ವಿದ್ಯುತ್ ಸಮಸ್ಯೆ ಇದೆ ಎಂಬುದು ಕಾರಣವಲ್ಲ. ಬದಲಾಗಿ ಇದನ್ನು ಸರಿಯಾಗಿ ನಿರ್ವಹಿಸಿ ಜನರಿಗೆ ಸಮರ್ಪಕವಾಗಿ ಕುಡಿಯಲು ನೀರು ನೀಡಲು ಪಂಚಾಯತ್ ಮಾಡುವ ಅಸಡ್ಡೆ.

ಈ ಭಾಗದ ರಸ್ತೆಗಳೂ ಈಗಾಗಲೇ ಸಂಚರಿಸಲೂ ಆಯೋಗ್ಯವಾದ ಸ್ಥಿತಿಯಲ್ಲಿ ಇದೆ. ತೆರಿಗೆ ಸಂಗ್ರಹಿಸಲು ಮರೆಯದ ಗ್ರಾಮ ಪಂಚಾಯತ್ ಕೆರ್ನಡ್ಕ ಎಂಬಲ್ಲಿ ಎರಡು ವರ್ಷಗಳ ಹಿಂದೆ ಒಡೆದು ಹೋಗಿರುವ ಒಂದು ಸಣ್ಣ ಮೋರಿಯನ್ನೂ ಈ ತನಕ ಸರಿಪಡಿಸುವ ಗೋಜಿಗೇ ಹೋಗಿಲ್ಲ. ಹಲವಾರು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿತ್ತು. ಪ್ರತೀ ಸಲದಂತೆ ಇದೀಗ ಕೊನೆಯ ಬಾರಿ ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿ ಕನಿಷ್ಟ ಇಪ್ಪತ್ತು ದಿನಗಳೇ ಕಳೆದಿದೆ. ಅಂದೇ ಈ ವಿಚಾರ ಪಂಚಾಯತ್ ಗಮನಕ್ಕೆ ತಂದರೂ ಈ ತನಕ ಒಡೆದು ಹೋಗಿರುವ ಒಂದು ಸಣ್ಣ ಪೈಪ್ ಸರಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪಂಚಾಯತ್ ಮುಂದಾಗದ್ದು ವಿಪರ್ಯಾಸವಾಗಿದೆ.

error: Content is protected !!
Scroll to Top