(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ನವೆಂಬರ್ 8 ರಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತಮ್ಮ ದೈನಂದಿನ ವೇಳಾಪಟ್ಟಿಯಂತೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತರು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಸಚಿವರು, ಇಲಾಖೆಯ ಕೋವಿಡ್ ತಾಂತ್ರಿಕ ಸಹ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿ ಮೊದಲಿಗೆ 9 ರಿಂದ 10ನೇ ತರಗತಿ, ಬಳಿಕ 6 ರಿಂದ 8ನೇ ತರಗತಿ ಪ್ರಾರಂಭಿಸಲಾಗಿತ್ತು. ನಂತರ 1 ರಿಂದ 5ನೇ ತರಗತಿಗಳನ್ನು ಅರ್ಧ ದಿನ ಭೌತಿಕವಾಗಿ ಪ್ರಾರಂಭಿಸಿ ಇದೀಗ ಪೂರ್ಣ ಅವಧಿಗೆ ಭೌತಿಕವಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಾರಂಭಿಸಲಾಗಿತ್ತು. ಇನ್ನು ಅಂಗವಾಡಿ ಕೇಂದ್ರಗಳನ್ನು ನ.8ರಿಂದ ಭೌತಿಕವಾಗಿ ಪ್ರಾರಂಭಿಸಲು ಆದೇಶ ಮಾಡಿರುವ ಹಿನ್ನಲೆ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿನ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿನ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಸರಕಾರ ಅನುಮತಿ ನೀಡಿದೆ.
ಅಲ್ಲದೇ ಎಲ್ ಕೆಜಿ ಹಾಗೂ ಯುಕೆಜಿ ತರಗತಿಗಳ ಆರಂಭಕ್ಕೆ ಗೈಡ್ ಲೈನ್ಸ್ ಬಿಡುಗಡೆ ಮಾಡಿರುವ ಸರಕಾರ, ಎಲ್ ಕೆಜಿ ಹಾಗೂ ಯುಕೆಜಿ ಕೇಂದ್ರವನ್ನು ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಪೋಷಕರಿಗೂ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಆಗಿರಬೇಕು ಎಂದು ತಿಳಿಸಲಾಗಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ LKG, UKG ತರಗತಿಗಳು ಆರಂಭವಾಗಲಿದೆ. ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30 ರವರೆಗೆ ತರಗತಿ ನಡೆಸಬೇಕು ಎಂದು ಸೂಚನೆ ನೀಡಿದ್ದು, ಕೋವಿಡ್ ಲಕ್ಷಣಗಳಿರುವ ಮಕ್ಕಳಿಗೆ ತರಗತಿಗೆ ಪ್ರವೇಶವಿಲ್ಲ ಎಂದು ತಿಳಿಸಲಾಗಿದೆ.