ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚೂರಿ ಇರಿದು ಕೊಲೆ ➤ ತಂದೆ, ಮಗ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 04. ಸಣ್ಣಪುಟ್ಟ ಕಾರಣಕ್ಕೆ ಜಗಳವಾಡಿ ತಂದೆ ಹಾಗೂ ಮಗ ಸೇರಿ ನೆರೆಮನೆಯ ವ್ಯಕ್ತಿಯೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಬುಧವಾರದಂದು ತಡರಾತ್ರಿ ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.

ಕೊಲೆಯಾದವರನ್ನು ವೀರ ವೆಂಕಟೇಶ ಅಪಾರ್ಟ್ಮೆಂಟ್ ನಿವಾಸಿ ವಿನಾಯಕ ಕಾಮತ್(44) ಎಂದು ಗುರುತಿಸಲಾಗಿದೆ. ಕೊಲೆಗೈದವರನ್ನು ಅದೇ ಅಪಾರ್ಟ್ಮೆಂಟ್ ನಿವಾಸಿಗಳಾದ ತಂದೆ ಕೃಷ್ಣಾನಂದ ಕಿಣಿ ಹಾಗೂ ಮಗ ಅವಿನಾಶ್ ಕಿಣಿ ಎಂದು ತಿಳಿದುಬಂದಿದೆ. ಕಳೆದ 4 – 5 ದಿನಗಳ ಹಿಂದೆ ಅಪಾರ್ಟ್ಮೆಂಟ್ ನ ಮುಂಭಾಗದಲ್ಲಿ ಮಂಗಳೂರು ಮಹಾನಗರ ಪಾಲಿಕೆಯವರು ಸಿಮೆಂಟ್ ಹಾಕಿ ಸರಿ ಮಾಡಿದ್ದು, ಇದರ ಮೇಲೆ ಬೇರೆಯವರ ಕಾರು ಹೋಗುವ ವಿಚಾರದಲ್ಲಿ ಆರೋಪಿಗಳಿಬ್ಬರು ವಿನಾಯಕ್ ಕಾಮತ್ ಅವರ ಜೊತೆ ಜಗಳವಾಡಿದ್ದರು. ಬುಧವಾರದಂದು ರಾತ್ರಿ ಅಪಾರ್ಟ್ ಮೆಂಟ್ ನಲ್ಲಿ ಕೆಲವರು ದೀಪಾವಳಿ ಆಚರಿಸುತ್ತಿದ್ದ ವೇಳೆ ವಿನಾಯಕ್ ಅಪಾರ್ಟ್ಮೆಂಟ್ ಕೆಳಗೆ ಹೋಗಿದ್ದು, ಈ ಸಂದರ್ಭ ಪಾರ್ಕಿಂಗ್ ಸ್ಥಳದಲ್ಲಿದ್ದ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರೊಂದಿಗೆ ಜಗಳವಾಡತೊಡಗಿದ್ದರು. ಗಲಾಟೆ ಕೇಳಿ ವಿನಾಯಕ್ ಅವರ ತಾಯಿಯು ಕೆಳಕ್ಕೆ ಹೋದಾಗ ಅವರನ್ನು ತಳ್ಳಿ, ಆರೋಪಿ ಕೃಷ್ಣಾನಂದ ಕಿಣಿ ಕೈಯಲ್ಲಿದ್ದ ಚೂರಿಯಿಂದ ವಿನಾಯಕ ಅವರ ಎದೆಗೆ ಚುಚ್ಚಿದ್ದಾರೆ, ಅವರ ಮಗ ಕೂಡಾ ದೂಷಿಸುತ್ತಾ ಕೊಲೆಗೆ ಸಹಕರಿಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ವಿನಾಯಕ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಂದರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

Also Read  19.06.2020 News Highlights

error: Content is protected !!
Scroll to Top